
ಹಡಪದ ಅಪ್ಪಣ್ಣ ಜಯಂತಿ
ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಹಕಾರದೊಂದಿಗೆ ಗುರುವಾರ ತುಳುಭವನದಲ್ಲಿ ಹಡಪದ ಅಪ್ಪಣ್ಣ ಜಯಂತಿ ನಡೆಯಿತು.
ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿ, 12ನೇ ಶತಮಾನದ ಶ್ರೇಷ್ಠ ಅನುಭಾವಿ ಹಡಪದ ಅಪ್ಪಣ್ಣನವರು ಕಂಡರೆ ಅಪಶಕುನ ಎಂದು ಸಮಾಜ ದೂರಮಾಡಿದ ಕ್ಷೌರಿಕ ಸಮಾಜದವರು. ಅವರ ಕಾಯಕ ನಿಷ್ಠ, ಅನುಭವದಲ್ಲಿ ಏರಿದ ಎತ್ತರಗಳನ್ನು ಗುರುತಿಸಿ ಬಸವಣ್ಣ ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ಮಾಡಿಕೊಂಡರು. ಅವರನ್ನು ದರ್ಶಿಸಿದ ಮೇಲೆಯೇ ನಿತ್ಯ ಕಾಯಕಕ್ಕೆ ತಾವೂ ತೊಡಗಿ ಇತರರೂ ತೊಡಗುವಂತೇ ಮಾಡಿದರು.
ಹಡಪದ ಅಪ್ಪಣ್ಣ ವಿಜಯಪುರದ ಬಸವನ ಬಾಗೇವಾಡಿಯ ಇಂಗಳೇಶ್ವರದ ಸಮೀಪದ ಮಸಬಿನಾಳ ಗ್ರಾಮದ ಚನ್ನವೀರಪ್ಪ- ದೇವಕಮ್ಮರ ಪುಣ್ಯಗರ್ಭದಲ್ಲಿ ಜನಿಸಿದರು. ದೇಗಿನಾಳ ಗ್ರಾಮದ ಜೀರನಾಗಪ್ಪ ಚನ್ನಬಸಮ್ಮರ ಮಗಳು ಲಿಂಗಮ್ಮನವರನ್ನು ವಿವಾಹವಾದವರು. ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದು, ಕೂಡಲ ಸಂಗಮದಿಂದ ಬಸವಣ್ಣ ಬಂದಮೇಲೆ ಮತ್ತೆ ಅವರೊಂದಿಗೆ ಸೇರಿಕೊಂಡು ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿದ್ದು ಶರಣ ಚಳುವಳಿ ನಡೆಸಿದವರು. ಅಪ್ಪಣ್ಣರಲ್ಲಿನ ಲೌಕಿಕ ಪಾರಮಾರ್ಥಿಕ ಎರಡರಲ್ಲೂ ಏಕಕಾಲದಲ್ಲಿ ಲೀನವಾಗುವ ಸಾಮಥ್ರ್ಯವನ್ನು ಕಂಡು ಅಲ್ಲಮಪ್ರಭು ಅಪ್ಪಣ್ಣನಿಗೆ ’ನಿಜಸುಖಿ ಅಪ್ಪಣ್ಣ’ ಎಂದು ಕರೆದರು. ಅವರ ಪತ್ನಿಯನ್ನು ’ನಿಜಮುಕ್ತೆ ಲಿಂಗಮ್ಮ’ ಎಂದು ಶರಣರು ಕರೆಯುತ್ತಿದ್ದರು. ಪತ್ನಿ ಲಿಂಗಮ್ಮನೂ ಶರಣೆಯಾಗಿದ್ದು ’ಅಪ್ಪಣ್ಣ ಪ್ರಿಯ ಚನ್ನಬಸವಣ್ಣ’ ಅಂಕಿತದಲ್ಲಿ 114 ವಚನಗಳನ್ನು ಬರೆದಿದ್ದಾಳೆ. ’ಬಸವಪ್ರಿಯ ಕೂಡಲ ಚನ್ನಬಸವಣ್ಣ’ ಎನ್ನುವ ಅಂಕಿತದಲ್ಲಿ ಹಡಪದ ಅಪ್ಪಣ್ಣನ 250 ವಚನಗಳು ಲಭ್ಯವಾಗಿವೆ ಎಚಿದು ಹೇಳಿದರು.
ಅವರ ವಚನಗಳಲ್ಲಿ ವೈರಾಗ್ಯ, ಕಾಯಕನಿಷ್ಠೆ, ವೈಚಾರಿಕತೆ, ದಾಸೋಹ, ಆಚಾರ, ವಿಚಾರಗಳು ಪ್ರತಿಬಿಂಬಿಸಿವೆ. ಕಲ್ಯಾಣ ಕ್ರಾಂತಿಯ ತರುವಾಯ ಅಪ್ಪಣ್ಣನವರು ಕೃಷ್ಣ ನದಿ ದಂಡೆಯ ಮೇಲಿನ ತಂಗಡಗಿ ಎಂಬಲ್ಲಿ ಐಕ್ಯರಾದರು ಎಂದು ತಿಳಿಸಿದರು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಮಲ್ಲೇಶ್ ಹಡಪದ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.