ಕ್ಲಾಕ್ ಟವರ್-ಸ್ಟೇಟ್‌ಬ್ಯಾಂಕ್ ದ್ವಿಮುಖ ಸಂಚಾರ: ಕೂಡಲೇ ವರದಿ ಸಲ್ಲಿಸಲು ಡಿಸಿ ಸೂಚನೆ

ಕ್ಲಾಕ್ ಟವರ್-ಸ್ಟೇಟ್‌ಬ್ಯಾಂಕ್ ದ್ವಿಮುಖ ಸಂಚಾರ: ಕೂಡಲೇ ವರದಿ ಸಲ್ಲಿಸಲು ಡಿಸಿ ಸೂಚನೆ


ಮಂಗಳೂರು: ನಗರದ ಕೇಂದ್ರಭಾಗ ಕ್ಲಾಕ್ಟವರ್ನಿಂದ   ಸ್ಟೇಟ್‌ಬ್ಯಾಂಕ್‌ಗೆ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪಡಿಸುವ ಬಗ್ಗೆ ಕೂಡಲೇ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧ ಸಭಾಂಗಣದಲ್ಲಿ ನಡೆದ  ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ದ್ವಿಮುಖ ವಾಹನ ಸಂಚಾರವಿದ್ದ ಈ ರಸ್ತೆಯನ್ನು  ಏಕಮುಖ ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ  ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ  ದ್ವಿಮುಖ ಸಂಚಾರಕ್ಕೆ ಕೈಗೊಳ್ಳಬೇಕಾದ ಕಾಮಗಾರಿ ಮತ್ತು ಅಗತ್ಯವಿರುವ ಅನುದಾನದ ಕುರಿತು ಮುಂದಿನ ವಾರ ವರದಿ ಸಲ್ಲಿಸುವಂತೆ  ಜಿಲ್ಲಾಧಿಕಾರಿಗಳು ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.  

 ಸಭೆಯಲ್ಲಿ ಉಪಸ್ಥಿತರಿದ್ದ ಉಪ ಪೋಲಿಸ್ ಆಯುಕ್ತ    ಸಿದ್ದಾರ್ಥ್ ಗೋಯಲ್ ಮಾತನಾಡಿ, ಕ್ಲಾಕ್ಟವರ್  ರಸ್ತೆಯ ಸಮೀಪದಲ್ಲಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಪ್ರಮುಖ ಕಚೇರಿಗಳಿದ್ದು,  ಏಕಮುಖ ಸಂಚಾರದಿಂದ ತುರ್ತು ಸಂದರ್ಭಗಳಲ್ಲಿ ಸುತ್ತ್ತಿ ಬಳಸಿ ತೆರಳಬೇಕಾದ ಅನಿವಾರ್ಯತೆ ಇದೆ.  ಅಲ್ಲದೆ ಪ್ರಸ್ತುತ ಈ ರಸ್ತೆಯ ಒಂದು ಬದಿಯಲ್ಲಿ ಬಸ್ ಹಾಗೂ ಇತರೆ ವಾಹನಗಳ ಪಾಕಿರ್ಂಗ್  ತಾಣವಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. 

ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾತನಾಡಿ, ಈ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ಅಭಿವೃದ್ಧಿ ಪಡಿಸಿ  ಕಾಮಗಾರಿಯನ್ನು ಈಗಾಗಲೇ ಮಹಾನಗರಪಾಲಿಕೆಗೆ   ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಸ್ಟೇಟ್‌ಬ್ಯಾಂಕ್ ಹ್ಯಾಮಿಲ್ಟನ್ ವೃತ್ತವನ್ನು ವೈಜ್ಞಾನಿಕವಾಗಿ ನಿರ್ಮಿಸಲು ಎನ್.ಐ.ಟಿ .ಕೆ ಸಂಸ್ಥೆಯಿಂದ ತಾಂತ್ರಿಕ ವರದಿ ಪಡೆಯಲಾಗಿದ್ದು, ಈ ಕುರಿತು ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 

ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ರಸ್ತೆ ಮಧ್ಯೆ ಶಾಶ್ವತ ಬ್ಯಾರಿಕೇಡ್ಗಳನ್ನು ಅಳವಡಿಸಿರುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.  ನಗರದ ಕರಾವಳಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್, ಬಲ್ಮಠ ಜಂಕ್ಷನ್ಗಳಲ್ಲಿ ರಸ್ತೆ ವಿಭಜಕಗಳಿಗೆ ಕಬ್ಬಿಣದ ರೀಲಿಂಗ್ಸ್ ಹಾಕಲು  ಒಂದು ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು  ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದರು. ಅಲ್ಲದೆ ಈ ಜಂಕ್ಷನ್ಗಳಲ್ಲಿರುವ  ಬಸ್ ನಿಲ್ದಾಣಗಳನ್ನು ಸಮೀಪದ ಜಾಗಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 

ನಗರದಲ್ಲಿ ಫುಟ್ ಪಾತ್ ಅತಿಕ್ರಮಿಸಿದ ಅಂಗಡಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಪದೇ ಪದೇ ಒತ್ತುವರಿ ತೆರವು ಕಾರ್ಯಾಚರಣೆ ಬದಲು ಶಾಶ್ವತವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಬೈಕಂಪಾಡಿ ಅಂಡರ್ಪಾಸ್:

ರಾಷ್ಟ್ರೀಯ ಹೆದ್ದಾರಿ ಬೈಕಂಪಾಡಿಯಲ್ಲಿ  ಜೋಕಟ್ಟೆ ಕ್ರಾಸ್ ಬಳಿ  ವಾಹನಗಳು ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯಲು ಅಂಡರ್ಪಾಸ್ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ  ಜಾವಿದ್ ಅಬ್ದುಲ್ಲಾ  ಸಭೆಗೆ ತಿಳಿಸಿದರು.ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್.ಕೆ , ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್,  ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಹಾಗೂ  ವಿವಿಧ ಇಲಾಖೆ ಅಧಿಕಾರಿಗಳು, ಸಮಿತಿ ಸದಸ್ಯ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article