ಪಾಲಿಕೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಕಸ ಸಂಗ್ರಹ ಸ್ಥಗಿತ

ಪಾಲಿಕೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಕಸ ಸಂಗ್ರಹ ಸ್ಥಗಿತ


ಮಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಂಗಳೂರಿನ ಎಸ್.ಕೆ. ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಆಶ್ರಯದಲ್ಲಿ ಪಾಲಿಕೆ ನೌಕರರು ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಗುರುವಾರದಿಂದ ಕಚೇರಿ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಇಳಿದಿದ್ದಾರೆ.

ಮಂಗಳೂರು ಪಾಲಿಕೆ ಕಚೇರಿ ಮುಂಭಾಗ ಬೆಳಗ್ಗೆ ಪ್ರತಿಭಟನಾ ಸಭೆ ನಡೆಸಿ ಸಾಂಕೇತಿಕವಾಗಿ ಪಾಲಿಕೆಯ ಮುಖ್ಯದ್ವಾರವನ್ನು ಮುಚ್ಚಿ ಧರಣಿ ಕುಳಿತರು. ನೌಕರರ ಮುಷ್ಕರಕ್ಕೆ ಪೌರ ಕಾರ್ಮಿಕರೂ ಬೆಂಬಲ ನೀಡಿದ್ದು, ಇದರಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸ್ಥಗಿತಗೊಂಡಿದೆ.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೂನಿಯನ್ ಜಿಲ್ಲಾಧ್ಯಕ್ಷ ಬಾಲು, ನಮ್ಮ ರಾಜ್ಯ ಸಂಘಟನೆ ಕರೆ ನೀಡಿದರೂ ನಾಗರಿಕರ ಹಿತದೃಷ್ಟಿಯಿಂದ ಮಂಗಳೂರಿನಲ್ಲಿ ಎರಡು ದಿನಗಳ ಬಳಿಕ ಮುಷ್ಕರಕ್ಕೆ ಇಳಿಯಲಾಗಿದೆ. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ, ನಗರ ಯೋಜನೆ, ಆಶ್ರಯ, ಆರೋಗ್ಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 400ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಇದರಿಂದಾಗಿ ಪಾಲಿಕೆ ಕಚೇರಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದೆ. ಬೇಡಿಕೆ ಈಡೇರುವ ವರೆಗೂ ಧರಣಿ ಪ್ರತಿಭಟನೆ ಮುಂದುವರಿಯಲಿದೆ. ನಮ್ಮ ಹೋರಾಟವನ್ನು ಬೆಂಬಲಿಸಿ ಪೌರ ಕಾರ್ಮಿಕರೂ ಪ್ರತಿಭಟನೆಗೆ ಕೈಗೋಡಿಸಿದ್ದು, ಕಸ ವಿಲೇವಾರಿಯನ್ನೂ ಸ್ಥಗಿತಗೊಳಿಸಿದ್ದಾರೆ ಎಂದರು.

2011ರ ಬಳಿಕ 14 ವರ್ಷಗಳಿಂದ ಸಿ ಅಂಡ್ ಆರ್ ರೂಲ್‌ಗೆ ತಿದ್ದುಪಡಿಯಾಗಿಲ್ಲ. 35-36 ವರ್ಷ ಕಾರ್ಯನಿರ್ವಹಿಸಿದವರು ಬಡ್ತಿ ರಹಿತವಾಗಿ ನಿವೃತ್ತಿ ಹೊಂದುವಂತಾಗಿದೆ. ಇಲ್ಲಿ ದುಡಿಯುವ ನೌಕರರಿಗೆ ಸೇವಾ ಭದ್ರತೆ ಇಲ್ಲ. ಆರೋಗ್ಯ ಸಂಜೀವಿನಿ ಹಿರಿಯ ಅಧಿಕಾರಿಗಳಿಗೆ ಮಾತ್ರ ಇದೆ, ನೌಕರರಿಗೆ ಇಲ್ಲ ಎಂದರು.

ಪಾಲಿಕೆಯ ಆಯುಕ್ತರಂತಹ ಹುದ್ದೆಗಳನ್ನು ಬಡ್ತಿ ಸಿಕ್ಕಿದರೂ ಕೆಳಹಂತದಿಂದ ಬಂದ ನೌಕರರಿಗೆ ನೀಡುತ್ತಿಲ್ಲ. ವೇತನ ಅನುದಾನ ಶೇ.20 ನೌಕರರು ಮತ್ತು ಶೇ. 80ರಷ್ಟು ಮೊತ್ತವನ್ನು ಸರ್ಕಾರ ಭರಿಸುತ್ತದೆ. ಪಾಲಿಕೆ ಆದಾಯ ನೌಕರರ ವೇತನಕ್ಕೆ ಸಾಲುತ್ತಿಲ್ಲ. ಶಿವಮೊಗ್ಗ, ಕಲಬುರಗಿಗಳಲ್ಲಿ ಮೂರು ತಿಂಗಳಿಂದ ನೌಕರರಿಗೆ ವೇತನ ಪಾವತಿಯಾಗುತ್ತಿಲ್ಲ. ಎಸ್‌ಎಫ್‌ಸಿ ನಿಧಿಯಿಂದ ನೌಕರರಿಗೂ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಯೂನಿಯನ್ ಉಪಾಧ್ಯಕ್ಷ ದೇವೇಂದ್ರಪ್ಪ ಪರಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಕಾರ್ಯದರ್ಶಿ ಶ್ರೀನಿವಾಸ ಗಟ್ಟಿ ಮತ್ತಿತರರಿದ್ದರು.

ಪಾಲಿಕೆ ಕಚೇರಿ ಮುಂಭಾಗ ಸಂಜೆ ವರೆಗೆ ಪ್ರತಿಭಟನಾ ಧರಣಿ ನಡೆಸಿದ ನೌಕರರು ವಿವಿಧ ಫಲಕಗಳನ್ನು ಹಿಡಿದು ಬೆಂಗಳೂರಿನ ಉನ್ನತ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article