ಮಗುವಿಗೆ ಜನ್ಮ ನೀಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ: ಪೋಕ್ಸೊ ಪ್ರಕರಣ ದಾಖಲು
ಕಾಸರಗೋಡು: ಬಾಲಕಿಯೋರ್ವಳು ಗರ್ಭಿಣಿಯಾಗಿ ಹೆರಿಗೆಯಾದ ಘಟನೆ ಕಾಞಿಂಗಾಡ್‌ನಲ್ಲಿ ನಡೆದಿದೆ. ಮನೆಯಲ್ಲಿ ಅಸ್ವಸ್ಥಗೊಂಡ ಹದಿನೈದರ ಹರೆಯದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಎಸ್‌ಎಸ್‌ಎಲ್‌ಸಿಯಲ್ಲಿ ಕಲಿಯುತ್ತಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣಾ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿದ್ಯಾರ್ಥಿನಿ ರಕ್ತಸ್ರಾವಕ್ಕೊಳಗಾದ ಹಿನ್ನೆಲೆಯಲ್ಲಿ ಆಕೆಯ ಹೇಳಿಕೆ ದಾಖಲಿಸಲು ಪೊಲೀಸರಿಗೆ ಆಗಿಲ್ಲ. ಮಗಳು ಗರ್ಭಿಣಿಯಾದದ್ದು ಗೊತ್ತಾಗಲೇ ಇಲ್ಲ ಎಂದು ಆಕೆಯ ತಾಯಿ ಹೇಳಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ತಾಯಿಯಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಕೆಲವೊಂದು ಸುಳಿವು ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಬಂಧಿಕರೊಬ್ಬರ ಬಗ್ಗೆ ಸಂಶಯ ಉಂಟಾಗಿದ್ದು, ಈಕೆಯ ಮನೆಗೆ ಬರುತ್ತಿದ್ದ ಕೆಲ ಸಂಬಂಧಿಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ವಿದ್ಯಾರ್ಥಿನಿ ತನ್ನ ಸಂಬಂಧಕರಿಂದಲೇ ಲೈಂಗಿಕ ದೌರ್ಜನ್ಯದ ಶೋಷಣೆಗೆ ಒಳಗಾಗಿರಬೇಕೆಂದೂ, ಆಕೆಯ ಹೇಳಿಕೆ ದಾಖಲಿಸಿ ಶಂಕಿತರ ಡಿಎನ್‌ಎ ತಪಾಸಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಞಂಗಾಡು ಡಿವೈಎಸ್ಪಿ ಬಾಬು ಪೆರಿಂಗೋತ್ತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.