
ಗಂಗೊಳ್ಳಿ ಶಾಲೆಯಲ್ಲಿ ಚಿಣ್ಣರ ಕೈತೋಟ ಉದ್ಘಾಟನೆ
Friday, July 11, 2025
ಕುಂದಾಪುರ: ಪ್ರಕೃತಿಯ ಉಳಿವಿಗಾಗಿ ಸಸಿಗಳನ್ನು ನೆಟ್ಟು ಪೋಷಿಸಿ, ಪ್ರೀತಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪ್ರಕೃತಿಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯವಾಗಿದೆ ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಹೇಳಿದರು.
ಮೇಲ್ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ಹವೇ)ಯಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಸಹಯೋಗದೊಂದಿಗೆ ನಿರ್ಮಿಸಿರುವ ಚಿಣ್ಣರ ಕೈತೋಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಖಾರ್ವಿ ಗಿಡಗಳನ್ನು ನೆಟ್ಟು ಶುಭ ಹಾರೈಸಿದರು. ಚಿಣ್ಣರ ತೋಟದಲ್ಲಿ ಮಕ್ಕಳು ಬೀಜದುಂಡೆ ಬಿತ್ತನೆ ಮಾಡಿ ಸಸಿಗಳನ್ನು ನೆಟ್ಟರು. ವಿವಿಧ ಜಾತಿಯ ತರಕಾರಿ ಬೀಜ, ತೊಂಡೆ, ಬಸಲೆ, ಕಬ್ಬು, ಬಾಳೆ ಗಿಡ, ಪಪ್ಪಾಯಿ ಗಿಡ, ಮಲ್ಲಿಗೆ ಮೊದಲಾದ ಗಿಡಗಳನ್ನು ತಮ್ಮ ಕೈಯ್ಯಾರೆ ನೆಟ್ಟು ಖುಷಿ ಪಟ್ಟರು.
ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ಶೇರುಗಾರ್, ಚಂದ್ರ ಖಾರ್ವಿ, ಎಸ್ಡಿಎಂಸಿ ಅಧ್ಯಕ್ಷೆ ಕವಿತಾ ಖಾರ್ವಿ, ಶಕುಂತಲಾ ಖಾರ್ವಿ, ಜ್ಯೋತಿ ಆನಂದ, ನಾಗಲಕ್ಷ್ಮೀ, ಸಹನಾ, ಕಾವೇರಿ ಮೊದಲಾದವರು ಇದ್ದರು.
ಮುಖ್ಯ ಶಿಕ್ಷಕ ಗುರುರಾಜ್ ಆಚಾರ್ಯ ಸ್ವಾಗತಿಸಿದರು. ಸಹಶಿಕ್ಷಕ ಯೋಗೀಶ್ ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ಖಾರ್ವಿ ವಂದಿಸಿದರು.