
ಜು.9 ರಂದು ಅಖಿಲ ಭಾರತ ಕಾರ್ಮಿಕರ ಮುಷ್ಕರ: ಹಳೇಬಂದರು ಸಗಟು ಮಾರುಕಟ್ಟೆ ಕಾರ್ಮಿಕರ ಬೆಂಬಲ, ಬಂದರು ಶ್ರಮಿಕರ ಸಂಘದಿಂದ ಸಭೆ
Saturday, July 5, 2025
ಮಂಗಳೂರು: ಕಾರ್ಮಿಕರ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಿ ಕಾರ್ಮಿಕರ ಹಕ್ಕನ್ನು ದಮನಗೊಳಿಸುತ್ತಿರುವ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (JCTU) ಮತ್ತು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಜುಲೈ 9ರಂದು ನಡೆಯಲಿರುವ ಅಖಿಲ ಭಾರತ ಕಾರ್ಮಿಕರ ಮುಷ್ಕರಕ್ಕೆ ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರು ಬೆಂಬಲ ವ್ಯಕ್ತಪಡಿಸಿ, ಜುಲೈ 9ರಂದು ಹಳೆ ಬಂದರು ಮಾರುಕಟ್ಟೆಯಲ್ಲಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ.
ಮಾರುಕಟ್ಟೆ ಚಟುವಟಿಕೆ ಆರಂಭಗೊಳ್ಳುತ್ತಿದ್ದಂತೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಜಮಾಯಿಸಿದ ಕಾರ್ಮಿಕರು ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಕಾಪೋರೇಟ್ ಲಾಬಿಗೆ ಸಂಪೂರ್ಣ ಶರಣಾಗತಿಯಾಗಿದೆ ನರೇಂದ್ರ ಮೋದಿ ಸರಕಾರದ ತಪ್ಪು ಆರ್ಥಿಕ ನೀತಿಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ. ದೇಶದ ಇತಿಹಾಸದಲ್ಲಿ ಎಂದೂ ಕಾಣದಷ್ಟು ನಿರುದ್ಯೋಗ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಕಾರ್ಮಿಕರ ಕಾನೂನುಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರಕಾರ ಸ್ಪಷ್ಟವಾಗಿ ದುಡಿಯುವ ವರ್ಗದ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ. ಕಾರ್ಮಿಕ ಕಾನೂನುನನ್ನು ಸಂಹಿತೆಯಾಗಿ ಜಾರಿಗೊಂಡರೆ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಳಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಮುಖರಾದ ಶಿವಾನಂದ ಪೆರುಮಾಲ್, ಸಿದ್ದಿಕ್ ಬೆಂಗರೆ,ಮಾಧವ ಕಾವೂರು, ಹಂಝ, ಲೋಕೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು
ಕೋಶಾಧಿಕಾರಿ ಫಾರೂಕ್ ಉಳ್ಳಾಲಬೈಲ್ ಸ್ವಾಗತಿಸಿ, ವಂದಿಸಿದರು.