.jpeg)
ಸುಳ್ಳು ಸುದ್ದಿ, ದ್ವೇಷ ಭಾಷಣಕ್ಕೆ ಕಡಿವಾಣ-ಅಧಿವೇಶನದಲ್ಲಿ ಮಸೂದೆ ಮಂಡನೆ: ಗೃಹ ಸಚಿವರು
ಮಂಗಳೂರು: ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಗೋಹತ್ಯೆಯನ್ನು ಒಳಗೊಂಡು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ವಿಷಯಗಳ ಕುರಿತಂತೆ ಈಗಿರುವ ಕಾನೂನು ಬಲಪಡಿಸುವ ಜತೆಗೆ ಹೊಸ ಕಾನೂನು ತರಲಾಗುವುದು ಎಂದು ಅವರು ಹೇಳಿದರು.
ಕಾನೂನು ಪ್ರಕಾರ ಏನೇ ನಡೆದರೂ ನಾವು ಮಾತನಾಡುವುದಿಲ್ಲ. ಆದರೆ ಉಲ್ಲಂಘನೆ ಆದರೆ ಬಿಡುವುದಿಲ್ಲ. ಗೋ ಸಾಗಾಟದ ಹೆಸರಿನಲ್ಲಿ ಪೊಲೀಸ್ ಗಿರಿ ಮಾಡಬಾರದು. ಅಕ್ರಮಗಳು ನಡೆಯುತ್ತಿದ್ದರೆ ಅದ್ನು ಪೊಲೀಸರಿಗೆ ತಿಳಿಸಿ, ಕಾನೂನುಕೈಗೆತ್ತಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು.
ಇಂದು ನಡೆದ ಸೌಹಾರ್ದ ಸಭೆ ಯಶಸ್ವಿಯಾಗಿ ನಡೆದಿದೆ. ಅನೇಕ ಧನಾತ್ಮಕ ವಿಚಾರಗಳು ಚರ್ಚೆ ಯಾಗಿವೆ. ಯಾರೂ ವಿರುದ್ಧವಾಗಿ ಮಾತನಾಡಿಲ್ಲ. ಸಭೆಯಲ್ಲಿ ಪ್ರಸ್ತಾವಿಸಲ್ಪಟ್ಟ ವಿಚಾರಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ರೀತಿಯ ಕಠಿಣ ಕ್ರಮಗಳಿಗೆ ಅವಕಾಶ ಯಾರೂ ನೀಡಬಾರದು ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆ ತನ್ನ ಕೆಲಸ ಮಾಡುತ್ತಿದೆ. ಜೊತೆಗೆ ಜನರು ಕೂಡಾ ತಮ್ಮ ಜವಾಬ್ಧಾರಿ ನಿರ್ವಹಿಸಬೇಕು. ಮರಳು ಮತ್ತು ಕೆಂಪು ಕಲ್ಲಿನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಪಕ್ಷದ ಕೆಲ ಶಾಸಕರ ಹೇಳಿಕೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲ ಶಾಸಕರು ಅವರ ಕ್ಷೇತ್ರದ ವಿಚಾರದಲ್ಲಿ ಮಾತ್ರ ಮಾತನಾಡಿದ್ದಾರೆ. ಕ್ಷೇತ್ರಕ್ಕೆ ಹಣ ಬಿಡುಗಡೆ ಆಗಿಲ್ಲ ಎಂಬ ಅವರ ಅನಿಸಿಕೆ ಹೇಳಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಗೊತ್ತಿಲ ಎಂದಷ್ಟೇ ಉತ್ತರಿಸಿದ ಅವರು, ಸಿಎಂ ಮತ್ತು ಡಿಸಿಎಂ ದೆಹಲಿ ಭೇಟಿಯೂ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು. ಪಕ್ಷದಲ್ಲಿ ಸಿಎಂ ಬದಲಾವಣೆ ಕುರಿತ ಹೇಳಿಕೆ ಹಾಗೂ ಸಿಎಂ ಸ್ಥಾನಕ್ಕೆ ನಿಮ್ಮ ಹೆಸರು ಕೂಡ ಪ್ರಸ್ತಾಪವಾಗುತ್ತಿದೆ ಎಂಬ ಮಾತಿಗೂ ಅವರ ಉತ್ತರಗೊತ್ತಿಲ್ಲ, ಅದನ್ನು ಬಿಟ್ಟು ಬೇರೆ ಕೇಳಿ ಎಂಬುದಾಗಿತ್ತು
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ನೀಡಿರುವ ದೂರಿನ ವಿಚಾರ ಗಮನಕ್ಕೆ ಬಂದಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಪೊಲೀಸ್ ಠಾಣೆಗಳಿಗೆ ಬರುವ ದಿನನಿತ್ಯದ ದೂರುಗಳು ಸರಕಾರದ ಗಮನಕ್ಕೆ ಬರುವುದಿಲ್ಲ. ನಮಗೆ ಆ ವಿಚಾರ ಬಂದಿಲ್ಲ. ಠಾಣೆಗಳಲ್ಲಿ ಎಫ್‌ಐಆರ್ ಆದಾಗ ಪೊಲೀಸ್ ಅಧಿಕಾರಿಗಳು ಆ ಬಗ್ಗೆ ಕ್ರಮ ವಹಿಸುತ್ತಾರೆ. ಸರಕಾರದ ಗಮನ ಸೆಳೆಯುವ ವಿಚಾರವಾದಾಗ ನಮ್ಮ ಗಮನಕ್ಕೆ ಬರುತ್ತದೆ ಎಂದು ಹೇಳಿದರು.