
‘ಯುವ ಜನತೆ ಜಾಗೃತರಾಗಿ ಮಾದಕ ವ್ಯಸನ ವಿರೋಧಿಸಬೇಕು’: ನ್ಯಾಯಾಧೀಶೆ ಜೈಬುನ್ನಿಸಾ
ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು, ಲಿಂಕ್ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಬಜಾಲ್, ಮಂಗಳೂರು ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು ಪರಿಗಣಿತ ವಿಶ್ವ ವಿದ್ಯಾನಿಲಯ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು.
ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ, ಮಾದಕ ವಸ್ತು ಮಾರಾಟ ಮತ್ತು ಅಕ್ರಮ ಸಾಗಾಣಿಕೆ ಜಾಗತಿಕವಾಗಿ ಪಸರಿಸಿದೆ. ಯುವಜನಾಂದ ಬಲಿಪಶು ಆಗುತ್ತಿದ್ದು, ದೇಶವನ್ನು ಅಶಕ್ತರನ್ನಾಗಿ ಮಾಡುತ್ತಿದ್ದಾರೆ. ಕ್ಷಣಿಕ ಸುಖಕ್ಕಾಗಿ ಮಾನಸಿಕ ಒತ್ತಾಡ ನಿವಾರಣೆಗಾಗಿ ಸಹಪಾಠಿಗಳ ಸಹವಾಸದೊಂದಿಗೆ, ಪ್ರಾಯೋಗಿತವಾಗಿ ಬಳಸುವುದು ಸರ್ವೆ ಸಾಮಾನ್ಯವಾಗಿದೆ. ಯುವ ಜನತೆ ಜಾಗೃತಿಗೊಂಡು, ಮಾದಕ ವ್ಯಸನವನ್ನು ವಿರೋಧಿಸುವ ಮೂಲಕ ಅಪರಾಧವನ್ನು ತಡೆಗಟ್ಟಬೇಕು. ಮಾದಕ ವ್ಯಸನ ಮುಕ್ತ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುವಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದರು.
ಮುಖ್ಯ ಅತಿಥಿಯಾಗಿದ್ದ ಸರಕಾರಿ ಲೇಡಿಗೋಶನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಮಾತನಾಡಿ, ಒಬ್ಬ ವ್ಯಕ್ತಿಗೆ ಕುಟುಂಬದ ಉತ್ತಮ ಸಂಸ್ಕಾರ, ಸಂಸ್ಕೃತಿ ಹಿರಿಯರ ಆಶೀರ್ವಾದದೊಂದಿಗೆ ಬೆಳೆದು ಬಂದಲ್ಲಿ ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು. ಸರಿಯಾದ ಶಿಕ್ಷಣ/ ಬೆಳೆದು ಬಂದ ಪರಿಸರ ಸರಿಯಾಗಿದ್ದಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಬಹುದು, ಆದ್ದರಿಂದ ಯುವಜನರೇ ಜಾಗೃತರಾಗಿ ಎಂಬ ಸಂದೇಶವನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಕುಲಪತಿ (ಪ್ರಭಾರ) ಆಲ್ವಿನ್ ಡೇಸ ಯುವಜನತೆಯನ್ನು ಉದ್ದೇಶಿಸಿ ಆರೋಗ್ಯಕರ, ಆರೋಗ್ಯವಂತ ಸಮಾಜಕ್ಕಾಗಿ ವಿದ್ಯಾರ್ಥಿ ಹಂತದಲ್ಲಿ ಬೇರೆ ಬೇರೆ ಸಂಘಟನೆಗಳ ಮೂಲಕ ಮಾದಕ ವಸ್ತು ವ್ಯಸನ ಮತ್ತು ಮಾರಾಟದ ಬಗ್ಗೆ ಜಾಗೃತಿಯನ್ನು ಮೂಡಿಸುವುದರೊಂದಿಗೆ ಸಮಾಜದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಕಡೆಗಣಿಸದೆ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಶಿಕ್ಷಣದಲ್ಲಿ ಅಂಕಗಳನ್ನು ಪಡೆಯುವುದೇ ಸಾಧನೆಯಲ್ಲ! ಅದರ ಜೊತೆಯಲ್ಲಿ ಉತ್ತಮವಾದ ಆರೋಗ್ಯಕರ ಸಮಾಜಕ್ಕಾಗಿ ಯುವ ಜನತೆ ತೊಡಗಿಸಿಕೊಳ್ಳಬೇಕು ಎಂದರು.
ಬಜಾಲ್ ಲಿಂಕ್ ವ್ಯಸನ ಮುಕ್ತ ಪುನರ್ವಸತಿ ಕೇಂದ್ರದ ಅಧ್ಯಕ್ಷ ಡಾ.ಸತೀಶ್ ರಾವ್, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಆರ್.ಎಂ.ಓ ಡಾ. ಜಗದೀಶ್, ಮನೋರೋಗ ತಜ್ಞ ಡಾ. ಪ್ರಜಕ್ತ ವಿ. ರಾವ್ ಉಪಸ್ಥಿತರಿದ್ದರು.