
ಕರಾವಳಿಯಲ್ಲಿ ಕೋಮುವಾದ ನಿರ್ನಾಮಕ್ಕೆ ಬದ್ಧ: ಜಯಶ್ರೀಕೃಷ್ಣ ಸಮಿತಿ
ಮಂಗಳೂರು: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮಾರಕವಾಗಿರುವ ಕೋಮುವಾದವನ್ನು ನಿರ್ನಾಮ ಮಾಡಲು ಬದ್ಧವಾಗಿರುವುದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಘೋಷಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಕೋಮುವಾದದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಲವು ಜೀವಗಳು ಬಲಿಯಾಗಿವೆ. ಮುಂದೆ ಅಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ಸಮಿತಿಯ ಮುಂಬೈಯಲ್ಲಿರುವ ಎಲ್ಲಾ ಸದಸ್ಯರು ಒಂದಾಗಿದ್ದೇವೆ ಎಂದು ಅವರು ಹೇಳಿದರು.
ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿಮಾತನಾಡಿ, ಸಮಿತಿಯನ್ನು ದ.ಕ. ಮತ್ತು ಉಡುಪಿಯ ಉದ್ದಗಲಕ್ಕೂ ವಿಸ್ತರಿಸಲಾಗಿದೆ. ಉಭಯ ಜಿಲ್ಲೆಗಳ ಪ್ರತಿ ತಾಲೂಕಿನಿಂದ ಸಂಪನ್ಮೂಲ ಭರಿತ ಐದು ಮಂದಿಯ ಸದಸ್ಯರನ್ನು ಮಾಡಿ ಇಲ್ಲಿನ ಸುರಕ್ಷತೆ, ಹಾಗೂ ಸೌಹಾರ್ದತೆಯ ದೃಷ್ಟಿಯಿಂದ ಕಾರ್ಯ ನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇಲ್ಲಿನ ದೇವಾಲಯಗಳ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು ಹಾಗೂ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿಯೂ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಸಮಿತಿಯ ಹೈದರ್ ಪರ್ತಿಪ್ಪಾಡಿ ಮಾತನಾಡಿ, ಜಿಲ್ಲೆಯ ಸೌಹಾರ್ದತೆಗೆ ಮುಂಬೈಯಲ್ಲಿ ನೆಲೆಸಿರುವ ಕರಾವಳಿಗರು ಕೈಜೋಡಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದರು.
ವಿಲ್ಸನ್ ಅವರು ಮಾತನಾಡಿ, ಮಾನವೀಯತೆಯೇ ಶ್ರೇಷ್ಠ ಧರ್ಮ ಎಂಬುದು ಯುವಕರಿಗೆ ಮನದಟ್ಟಾಗುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಸಮಿತಿಯ ರಾಜ್ಯ ಸಂಯೋಜಕ ಜಗದೀಶ್ ಅಧಿಕಾರಿ ಕೆ.ಪಿ. ಮಾತನಾಡಿ, ಎಲ್ಲಾ ವಿಚಾರದಲ್ಲೂ ಮುಂಚೂಣಿಯಲ್ಲಿರುವ ಕರಾವಳಿಯಲ್ಲಿ ಮತೀಯ ವಿಚಾರಕ್ಕೆ ನಡೆಯುವ ಸಂಘರ್ಷಗಳಿಗೆ ಸಂಬಂಧಿಸಿ
ಸರಕಾರ ಗಂಭೀರವಾಗಿ ಪರಿಗಣಿಸಿ, ನಮ್ಮ ಬೇಡಿಕೆಗೆ ಪೂರಕವಾಗಿ ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂದರು.
80+ ವರ್ಷ ಪ್ರಾಯದವರು 18 ವರ್ಷದ ಯುವಕರನ್ನು ಮತೀಯವಾಗಿ ಪ್ರಚೋದನೆಗೊಳಿಸಿ ಸಂಘರ್ಷಕ್ಕೆ ಕಾರಣವಾಗುವ ಕೃತ್ಯಗಳು ಕೊನೆಯಾಗಬೇಕು. ನಮ್ಮ ಯುವಕರು ಇಂತಹ ಮತೀಯ
ಸಂಘರ್ಷಗಳ ಕಾರಣಕ್ಕೆ ಜೈಲು ಪಾಲಾಗುವುದನ್ನು ತಡೆಯಬೇಕು. ಇಲ್ಲಿನ ಯುವ ಪೀಳಿಗೆಯನ್ನು ಹಾದಿತಪ್ಪಿಸುತ್ತಿರುವ ಮಾದಕ ದ್ರವ್ಯಗಳ ವ್ಯಸನಗಳಿಂದ ಮುಕ್ತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಮಂಗಳೂರನಿಂದ ಉತ್ತಮ ಸಂದೇಶವನ್ನು ನೀಡುವುದಕ್ಕೆ ಬದ್ಧವಾಗಿ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಕಾಯದರ್ಶಿ ಸುರೇಂದ್ರ ಮೆಂಡನ್, ಜಿಲ್ಲಾ ಕಾರ್ಯದರ್ಶಿ ಜಿ.ಟಿ. ಆಚಾರ್ಯ, ಉಪ ಕಾರ್ಯಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗ, ವಕ್ತಾರ ದಯಾಸಾಗರ್ ಚೌಟ ಮೊದಲಾದವರು ಉಪಸ್ಥಿತರಿದ್ದರು.