
ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚನೆ ಕಡ್ಡಾಯ: ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚನೆ ಮಾಡುವು ದನ್ನು ಕಡ್ಡಾಯಗೊಳಿಸಲಾಗಿದೆ. ಕೆಲ ಶಿಕ್ಷಣ ಸಂಸ್ಥೆಗಳು ಈಗಾಗಲೇ ಸಮಿತಿ ರಚಿಸಿರುವ ಬಗ್ಗೆ ವರದಿ ನೀಡಿವೆ. ಜತೆಗೆ ಸಂಸ್ಥೆಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಸ್ಕ್ರೀನಿಂಗ್ ವ್ಯವಸ್ಥೆಯನ್ನೂ ಮಾಡುವ ಮೂಲಕ ಜಿಲ್ಲೆ ಡ್ರಗ್ಸ್ ಮುಕ್ತವನ್ನಾಗಿಸಲು ಸಹಕರಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಶಿಕ್ಷಣ ಸಂಸ್ಥೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸರ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜೆ, ಮಂಗಳೂರು ರೋಟರಿ ಕ್ಲಬ್, ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಸಹಭಾಗಿತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾದಕ ದ್ರವ್ಯಗಳ ಬಳಕೆ ವಿರುದ್ಧ ಜಾಗೃತಿ ಹಾಗೂ ಕಾಲೇಜುಗಳ ಡ್ರಗ್ಸ್ ವಿರೋಧಿ ಸಮಿತಿಗಳಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಈ ಸೂಚನೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮಾತನಾಡಿ, ಡ್ರಗ್ಸ್ ಸೇವನೆಗೆ ಸಂಬಂಧಿಸಿ 500 ಜನ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. ಕೆಲ ಸಮಯದ ಹಿಂದೆ ನಡೆದ ಡ್ರಗ್ಸ್ ನಿಯಂತ್ರಣ ಕಾರ್ಯಕ್ರಮದ ಬಳಿಕ 150 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದರು.
ಈಗಾಗಲೇ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಡ್ರಗ್ಸ್ ವಿರೋಧಿ ಸಮಿತಿಗಳನ್ನು ರಚಿಸಲು ತಿಳಿಸಲಾಗಿದೆ. ಒಂದು ತಿಂಗಳಲ್ಲಿ 100 ಕಾಲೇಜುಗಳವರು ಸಮಿತಿ ಮಾಡಿರುವುದಾಗಿ ಹೇಳಿದ್ದಾರೆ. ಇನ್ನೂ ಸುಮಾರು 40 ಕಾಲೇಜುಗಳು ಬಾಕಿ ಇವೆ. ಡ್ರಗ್ಸ್ ಸೇವನೆ ಕುರಿತು ವಿದ್ಯಾರ್ಥಿಗಳನ್ನು ನಿಯಮಿತವಾಗಿ ಸ್ಕ್ರೀನಿಂಗ್ಗೆ ಒಳಪಡಿಸಲು ನಿರ್ದೇಶನ ನೀಡಲಾಗಿದೆ. ಪೊಲೀಸರು ಕಾಲೇಜಿಗೆ ಬಂದು ಈ ರೀತಿಯ ತಪಾಸಣೆಗಳನ್ನು ಮಾಡುವುದು ನಮಗೆ ಇಷ್ಟ ಇಲ್ಲ. ಹಾಗಾಗಿ ಶಿಕ್ಷಣ ಸಂಸ್ಥೆಗಳೇ ಇದನ್ನು ಜವಾಬ್ಧಾರಿಯುತವಾಗಿ ಮಾಡ ಬೇಕು. ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದಾದರೆ ನಾವು ಮಾಡುವುದು ಅನಿವಾರ್ಯವಾಗಲಿದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ದ. ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಮಾತನಾಡಿ ‘ಡ್ರಗ್ಸ್ ವಿರೋಧಿ ಸಮಿತಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯಗೊಳಿಸಲಾಗಿದ್ದು, ಕಟ್ಟುನಿಟ್ಟಾಗಿ ರಚನೆ ಮಾಡಬೇಕು. ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಇನ್ನೂ ಕೆಲವು ಸಂಸ್ಥೆಗಳಲ್ಲಿ ಆಗಿಲ್ಲ. ಒಂದು ತಿಂಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಅಂಗಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕು. ಸ್ಕ್ರೀನಿಂಗ್ ಯಾವ ರೀತಿಯಲ್ಲಿ ಮಾಡಬೇಕು ಎಂಬ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನ ಹರಿಸಬೇಕು. ಡ್ರಗ್ಸ್ ಸೇವನೆ ಮಾಡುವ ಮಾಹಿತಿ ಒದಗಿಸುವ ಅಂಜಿ ಇಲ್ಲದೆ, ಅದರ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಜಿಲ್ಲೆಯನ್ನು ಡ್ರಗ್ಸ್ ಮುಕ್ತಗೊಳಿಸಲು ಸಮಾಜ ಸಹಕರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಪಿ ಡಾ. ಅರುಣ್ ಕುಮಾರ್, ಡ್ರಗ್ಸ್ ನಿಯಂತ್ರಣದಲ್ಲಿ ಸಮಾಜದ ಎಲ್ಲರ ಜವಾಬ್ಧಾರಿ ಇದೆ. ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿಗಳನ್ನು ಕಡ್ಡಾಯಗೊಳಿಸಲಾಗಿದೆ. ಹಾಗಿದ್ದರೂ ಸಮಸ್ಯೆ ಕಡಿಮೆ ಆಗುವ ಬದಲು ಹೆಚ್ಚಾಗಿದೆ ಎಂದರೆ, ವ್ಯವಸ್ಥೆಯಲ್ಲೇ ಲೋಪ ಇರುವುದನ್ನು ಒಪ್ಪಿಕೊಂಡು ಅದನ್ನು ಸರಿಪಡಿಸುವತ್ತ ನಾವು ಗಮನ ಹರಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ನಲ್ಲಿ ಮಾದಕ ದ್ರವ್ಯ ಸೇವನೆ ಕುರಿತಂತೆ ಅಂಜಿಕೆ ವಹಿಸದೆ, ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಭಟ್ ಮಾತನಾಡಿ, ಮಕ್ಕಳ ಹಾವಭಾವಗಳಲ್ಲಿ ವ್ಯತ್ಯಾಸ ಕಂಡು ಬಂದಾಗ ಪೋಷಕರ ಜತೆ ಶಿಕ್ಷಣ ಸಂಸ್ಥೆಗಳವರೂ ಗಮನ ಹರಿಸುವುದು ಮುಖ್ಯ ಎಂದರು.
ಬಾರ್ಕ್ ಡಿ ಎಡಿಕ್ಷನ್ ಸಂಸ್ಥೆಯ ಸಂಸ್ಥಾಪಕ ಗುರುಪ್ರಸಾದ್ ಮಾತನಾಡಿ, ಡ್ರಗ್ಸ್‌ನಿಂದ ತಾನು 17 ವರ್ಷಗಳ ಕಾಲ ಅನುಭವಿಸಿದ ನರಕಯಾತನೆಯನ್ನು ವಿವರಿಸಿದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್‌ನ ಮುಖ್ಯಸ್ಥ ವಿನೋದ್ ಅರಾನ್ಹ, ಮಾದಕ ದ್ರವ್ಯ ವಿರೋಧಿ ಘಟಕ (ನಾರ್ಕೋಡ್)ದ ಪ್ರಮುಖರಾದ ಹೇಮಲತಾ, ರಾಜೇಶ್ವರಿ, ಸುಜಿತ್, ಗೋವಿಂದ ಮಡಿವಾಳ ಉಪಸ್ಥಿತರಿದ್ದರು.
ಎಸಿಪಿ ಗೀತಾ ಕುಲಕರ್ಣಿ ಸ್ವಾಗತಿಸಿದರು. ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಲೀಂ ಅಬ್ಬಾಸ್ ವಂದಿಸಿದರು. ವಿವಿಧ ಕಾಲೇಜುಗಳ ಮುಖ್ಯಸ್ಥರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.