ಪುಸ್ತಕವೆಂಬುದು ಸರಕಾಗದೆ ಸಂಸ್ಕೃತಿಯಾಗಬೇಕು: ಡಾ. ಮಾನಸ

ಪುಸ್ತಕವೆಂಬುದು ಸರಕಾಗದೆ ಸಂಸ್ಕೃತಿಯಾಗಬೇಕು: ಡಾ. ಮಾನಸ


ಮಂಗಳೂರು: ಪುಸ್ತಕವೆಂದರೆ ಜ್ಞಾನದ ಸಂಕೇತ. ಜ್ಞಾನ ಸರಸ್ವತಿಯನ್ನು ನಾವು ಪುಸ್ತಕದಲ್ಲಿ ಕಾಣುತ್ತೇವೆ, ಆರಾಧಿಸುತ್ತೇವೆ. ಪುಸ್ತಕದ ಓದಿನಿಂದ ಪಡೆದ ಜ್ಞಾನ ಶಾಶ್ವತವಾದುದು. ಆಧುನಿಕ ಗ್ಯಾಜೆಟ್‌ಗಳು ಬೇಕಾದ, ಬೇಡದ ಎಲ್ಲ ಮಾಹಿತಿಗಳ ಸಾಗರವೇ ಹೊರತು ಜ್ಞಾನದ ಆಗರವಲ್ಲ. ಆದ್ದರಿಂದ ಉತ್ತಮ ಪುಸ್ತಕಕ್ಕೆ ಪರ್ಯಾಯ ಬೇರೆ ಇಲ್ಲ. ಪುಸ್ತಕವೆಂಬುದು ಸರಕಾಗದೆ ಸಂಸ್ಕೃತಿಯಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.

ಅವರು ಇಂದು ನಗರದ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನ ಹಾಗೂ ಜಿಲ್ಲಾ ಜಾಗೃತಿ ಸಮಿತಿ ರಚನೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜ್ಞಾನದ ಕೊರತೆಯೇ ಬಡತನ, ಜೀವನಾನುಭವದ ಕೊರತೆಯೇ ಇಂದಿನ ಜನತೆಯ ನೂರೆಂಟು ಸಮಸ್ಯೆಗಳಿಗೆ ಕಾರಣ. ಒಳ್ಳೆಯ ಪುಸ್ತಕದ ಓದಿನಿಂದ ಸಿಗುವ ಅನುಭವ ದೊಡ್ಡದು. ಬದುಕಿನಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಗೆ ಒಳ್ಳೆಯ ಓದಿನಿಂದ ಪರಿಹಾರ ದೊರೆಯಬಹುದು. ಆದರೆ ಓದುವ ಆಸಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಅಷ್ಟೆ ಎಂದರು.

ಮೊದಲು ಪುಸ್ತಕದ ಪ್ರಕಟಣೆಯೇ ಕಷ್ಟವಿತ್ತು. ಒಳ್ಳೆಯ ಪುಸ್ತಕದ ಒಂದು ಆವೃತ್ತಿ ಮಾರಾಟವಾಗಿ ಮುಗಿದರೆ ಮತ್ತೊಂದು ಆವೃತ್ತಿ ಮುದ್ರಣಗೊಂಡು ಬರಬೇಕಾದರೆ ಅದೆಷ್ಟೋ ವರ್ಷಗಳೇ ಉರುಳುತ್ತಿದ್ದವು. ಅಷ್ಟು ಕಾಲ ಪುಸ್ತಕಕ್ಕಾಗಿ ಕಾಯಬೇಕಿತ್ತು. ಆದರೆ ಈಗ ಹಾಗಲ್ಲ, ಮುದ್ರಣ ತಂತ್ರಜ್ಞಾನದ ಅಭಿವೃದ್ಧಿಯಿಂದ ತ್ವರಿತವಾಗಿ ಪುಸ್ತಕಗಳ ಪ್ರಕಟಣೆ ಸಾಧ್ಯವಾಗಿದೆ. ಆದರೆ ಓದುಗರದೇ ಕೊರತೆ. ಇಂತಹ ಸನ್ನಿವೇಶವನ್ನು ಬದಲಾಯಿಸಿ ಪುಸ್ತಕದ ಓದಿನ ಆಸಕ್ತಿಯನ್ನು ಪುನರುಜ್ಜೀವನಗೊಳಿಸವ ನಿಟ್ಟಿನಲ್ಲಿ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ ಯೋಜನೆ ಹಾಕಿಕೊಳ್ಳಲಾಗಿದೆ. ಆ ಮೂಲಕ ಲಕ್ಷಾಂತರ ಗ್ರಂಥಾಲಯಗಳನ್ನು ಸೃಷ್ಟಿಸುವ ಉದ್ದೇಶ 

ಇರಿಸಿಕೊಳ್ಳಲಾಗಿದೆ. ಸಾಹಿತ್ಯ ಪ್ರಿಯರು ತಮ್ಮ ಮನೆಗಳಲ್ಲೇ ಒಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಳ್ಳಲು ಈ ಯೋಜನೆ ಮೂಲಕ ಉತ್ತೇಜನ ನೀಡಲಾಗುತ್ತಿದ್ದು, ಪುಸ್ತಕ ಪ್ರಾಧಿಕಾರದಿಂದ ಉತ್ತಮ ಪುಸ್ತಕಗಳನ್ನು ಅತ್ಯಂತ ಕಡಿಮೆ ಬೆಲೆಗೆ ತಲುಪಿಸಲಾಗುತ್ತದೆ ಎಂದು ಡಾ. ಮಾನಸ ಹೇಳಿದರು.

ದಿನದ ಬಹುಭಾಗವನ್ನು ಮೊಬೈಲ್ ವ್ಯಸನದಲ್ಲೇ ಕಳೆಯುವ ನಾವು ಪುಸ್ತಕದ ಕಡೆಗೆ ಮುಖಮಾಡಬೇಕಿದೆ. ಅ ಮೂಲಕ ಜೀವನದಲ್ಲಿ ಕಳೆದುಹೋದ ನೆಮ್ಮದಿಯನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಒಡೆದು ಹೋದ ಮನಸುಗಳನ್ನು ಬೆಸೆಯುವ, ಸಾಂಸ್ಕೃತಿಕ ಭಾವನೆಯನ್ನು ಗಟ್ಟಿಗೊಳಿಸುವ ಶಕ್ತಿ ಪುಸ್ತಕಗಳಿಗಿದೆ. ನಾವು ಜೀವನದ ಸವಾಲುಗಳನ್ನು ಎದುರಿಸುವ ಗಟ್ಟಿತನ ಬೆಳೆಸಿಕೊಳ್ಳಬೇಕಾದರೆ ಪುಸ್ತಕಗಳಿಗೇ ಮೊರೆಹೋಗಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದೆ ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಕೈಹಾಕುವ ಯುವಜನತೆ ಮೊದಲು ಡಾ. ಎಸ್.ಎಲ್ ಭೈರಪ್ಪನವರ ಕೃತಿಗಳನ್ನು ಓದಬೇಕು. ಅಗ ಜೀವನದ ಅರ್ಥ ತಿಳಿಯುತ್ತದೆ ಎಂದರು.

ಇಂದಿನ ಪೂರ್ವಭಾವಿ ಸಭೆಯಲ್ಲಿ ಪುಸ್ತಕ ಪ್ರೇಮಿಗಳು, ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರು, ಕಾಲೇಜುಗಳ ಗ್ರಂಥಪಾಲಕರು ಪಾಲ್ಗೊಂಡು ವಿಚಾರಗಳನ್ನು ಹಂಚಿಕೊಂಡರು.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶ್ರೀನಾಥ್ ಉಜಿರೆ ಅವರು ಸಭೆಯನ್ನು ಉದ್ಘಾಟಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಮನೆಗೊಂದು ಗ್ರಂಥಾಲಯ ಯೋಜನೆಯ ಕರಪತ್ರ ಬಿಡುಗಡೆ ಮಾಡಿದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪುಸ್ತಕ ಪ್ರಾಧಿಕಾರದ ಅಧಿಕಾರಿ ಶ್ರೀನಿವಾಸ್ ಕರಿಯಪ್ಪ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article