
ಜಯಾನಂದ ದೇವಾಡಿಗ ನಿಧನ
Tuesday, July 1, 2025
ಮಂಗಳೂರು: ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ, ಹಿಂದುಳಿದ ವರ್ಗಗಳ ನಾಯಕ ಜಯಾನಂದ ದೇವಾಡಿಗ (92) ಅವರು ಜು.1ರ ಮಂಗಳವಾರ ನಿಧನರಾದರು.
ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ, ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿಕೊಂಡು ಚಿನ್ನಪ್ಪ ರೆಡ್ಡಿ ವರದಿ, ಮಂಡಲ ವರದಿಯ ಜಾರಿಗೆ ಒತ್ತಾಯಿಸಿ ಹೋರಾಟಗಳನ್ನು ಸಂಘಟಿಸಿದವರು ಜಯಾನಂದ ದೇವಾಡಿಗ.
ಇವರು ಹಿರಿಯ ಕಾಂಗ್ರೆಸ್ಸಿಗ, ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಆತ್ಮೀಯರಾಗಿದ್ದು, ಸಮಸ್ತ ಹಿಂದುಳಿದ ವರ್ಗಗಳ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅದ್ವಿತೀಯ ಸಂಘಟಕರು, ಕರಾವಳಿ ಭಾಗದಲ್ಲಿ ದೇವಾಡಿಗ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಹಿಂದುಳಿದ ವರ್ಗಗಳ ಶಿಕ್ಷಣ, ಆರ್ಥಿಕ ಅಭಿವೃದ್ಧಿಗಾಗಿ, ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಗೋವಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದರು. ಭೂನ್ಯಾಯ ಮಂಡಳಿಯ ಸದಸ್ಯರಾಗಿ ಅನೇಕ ಗೇಣಿದಾರರಿಗೆ ನ್ಯಾಯ ದೊರಕಿಸಿ ಕೊಟ್ಟವರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.