ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಆಗ್ರಹ

ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಆಗ್ರಹ

ಮಂಗಳೂರು: ರಾಜ್ಯ ಸರಕಾರದ ಸಂವಿಧಾನ ತಿದ್ದುಪಡಿ ಲೋಪದಿಂದ ಕುಡುಬಿ ಸಮುದಾಯ ಹೆಸರು ಪರಿಶಿಷ್ಟ ಜಾತಿ ಪಟ್ಟಿಯಿಂದ ಬಿಟ್ಟು ಹೋಗಿದ್ದು, ಅದನ್ನು ಮರು ಸೇರ್ಪಡೆ ಮಾಡಲು ಕೇಂದ್ರ ಸರಕಾರ ಕ್ರಮ ವಹಿಸಬೇಕು ಎಂದು ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಆಗ್ರಹಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು, ಸಾಂವಿಧಾನಿಕ ತಿದ್ದುಪಡಿಯ ಲೋಪದ ಬಗ್ಗೆ ಕೇಂದ್ರ ಸರಕಾರಕ್ಕೂ ದಾಖಲೆಗಳ ಸಹಿತ ಮನವಿ ಸಲ್ಲಿಸಲಾಗಿದೆ. ರಾಜ್ಯದ ಎಲ್ಲ ಸಂಸದರಿಗೆ ದಾಖಲೆ ಸಹಿತ ಮನವಿ ಸಲ್ಲಿಸಿದ್ದು, ಸಂಸದರು ಕೇಂದ್ರ ಸರಕಾರಕ್ಕೆ ಮನವಿಕೆ ಮಾಡಿ ತಿದ್ದುಪಡಿ ಲೋಪ ಸರಿಪಡಿಸಬೇಕು ಎಂದು ಒತ್ತಾಯಿಸಿದರು. 

ಸಂವಿಧಾನದ ಉಪವಿಧಿ 341(1)ರಂತೆ ಕುಡುಬಿ ಜಾತಿಯನ್ನು ಸೇರಿಸಲಾಗಿತ್ತು. ಭಾಷಾವಾರು ರಾಜ್ಯಗಳ ವಿಂಗಡಣೆಗಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಾರ್ಪಾಡು ಆದೇಶ 1956ರಂತೆ ಮಾಡಿದ ಪಟ್ಟಿಯಲ್ಲಿ ಮೈಸೂರು ರಾಜ್ಯಕ್ಕೆ ಕುಡುಬಿ ಜಾತಿಯ ಹೆಸರನ್ನು ಕೈಬಿಟ್ಟಿರುವುದು ಸಾಂವಿಧಾನಿಕ ಲೋಪ. ಸಂವಿಧಾನ ಉಪವಿಧಿ 341(2)ರ ಮುಂದುವರಿದ ಭಾಗದಲ್ಲಿ 341(1)ರಡಿ ಮಾಡಿರುವ ಪಟ್ಟಿಯನ್ನು ಕೇಂದ್ರ ಅಥವಾ ರಾಜ್ಯ ಸರಕಾರ ತಿದ್ದುಪಡಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹಲವಾರು ವರ್ಷಗಳಿಂದ ಸಮುದಾಯದ ಬೇಡಿಕೆಗೆ ಅಂತಿಮವಾಗಿ ಸಿಗುವ ಉತ್ತರ ಕಲಂ 341(2)ರ ಪ್ರಾರಂಭದ ಭಾಗದ ಉಲ್ಲೇಖ ಮಾತ್ರ. ಈಗಾಗಲೇ 2008ರಲ್ಲಿ ಬಸವನಗೌಡ ಅವರು ಕುಲಶಾಸ್ತ್ರೀಯ ವರದಿ ಅಧ್ಯಯನ ಮಾಡಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಬಳಿಕ 2016ರಲ್ಲಿ ಮತ್ತೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿದ ಮನೋಹರ್ ಯಾದವ್ 2020ರಲ್ಲಿ ವರದಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಸೂಕ್ತ ಕ್ರಮ ಆಗಿಲ್ಲ. ಸದ್ಯ ಕುಡುಬಿ ಜಾತಿ ಪ್ರವರ್ಗ 1ರಲ್ಲಿದ್ದು, ಕೊಂಕಣಿ ಭಾಷಿಕರಾದ ಕುಡುಬಿ ಸಮುದಾಯದ ಸುಮಾರು 75,000 ಜನಸಂಖ್ಯೆ ಕರಾವಳಿ ಭಾಗದಲ್ಲಿದೆ ಎಂದು ಹೇಳಿದರು. 

ಪ್ರಧಾನ ಕಾರ್ಯದರ್ಶಿ ಶೇಖರ ಗೌಡ ಬಜ್ಪೆ, ರಾಜ್ಯ ಸಂಘದ ಉಪಾಧ್ಯಕ್ಷ ಕೆ. ರಾಮಪ್ಪ ಗೌಡ, ಕೋಶಾಧಿಕಾರಿ ಎಚ್. ರಾಮಗೌಡ, ಶಿಕ್ಷಣ ಸಂಚಾಲಕ ಉದಯ ಮಂಗಳೂರು, ಸದಸ್ಯ ತುಕರಾಂ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article