
ಜು.26ರಂದು ಕಾರ್ಗಿಲ್ ವಿಜಯ ದಿವಸ
ಮಂಗಳೂರು: ಕಾರ್ಗಿಲ್ ವಿಜಯ ದಿವಸದ ಸ್ಮರಣಾರ್ಥ ಜು. 26ರಂದು ಕದ್ರಿ ಯುದ್ಧ ಸ್ಮಾರಕದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ತಿಳಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಜೆ 6.30ಕ್ಕೆ ಕದ್ರಿ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಮಡಿದ ವೀರಯೋಧರಿಗೆ ಹೂ ಹಾರ ಅರ್ಪಿಸಿ, ಮೊಂಬತ್ತಿ ಬೆಳಗಿ ನಮನ ಸಲ್ಲಿಸಲಾಗುವುದು. ವಿಜಯೋತ್ಸವದ ಅಂಗವಾಗಿ ಸುರತ್ಕಲ್ ರಾಷ್ಟ್ರ ಭಕ್ತ ನಾಗರಿಕ ವೇದಿಕೆಯವರು ಮಾಜಿ ಸೈನಿಕರ ಕುಟುಂಬಗಳ ಕ್ಷೇಮಕ್ಕಾಗಿ ಧನ ಸಹಾಯ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರತಿ ವರ್ಷ ಸಂಘವು ಸಾರ್ವಜನಿಕರನ್ನು ಜತೆಗೂಡಿಸಿ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರ ಪ್ರೇಮದ ಬಗ್ಗೆ, ಬಲಿದಾನದ ಬಗ್ಗೆ ಮಾಹಿತಿ ಶಿಬಿರಗಳನ್ನು ನಡೆಸುತ್ತಿದೆ. ದೇಶದ ಯುವಜನತೆಗೆ ಧೈರ್ಯ, ಉತ್ತಮ ನಡವಳಿಕೆ ಮತ್ತು ಶಿಸ್ತುಗಳ ಬಗ್ಗೆ ಮನದಟ್ಟು ಆಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧವು ಭಾರತೀಯ ಯೋಧರ ಧೈರ್ಯ, ಶೂರತ್ವ, ತ್ಯಾಗ, ಬಲಿದಾನಗಳ ಸಂಕೇತವಾಗಿದೆ. ಅಸಾಧ್ಯವೆಂದು ಭಾವಹಿಸಿದ್ದ ಗುರಿಯನ್ನು ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಗಿಲ್ ವಿಜಯದ ಮೂಲಕ ಸಾಧ್ಯವಾಗಿಸಲಾಗಿತ್ತು ಎಂದು ಅವರು ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಕರ್ನಲ್ ಜಯಚಂದ್ರನ್, ಕ್ಯಾ. ದೀಪಕ್ ಅಡ್ಯಂತಾಯ, ವೆಟರನ್ ಸುಧೀರ್ ಪೈ ಉಪಸ್ಥಿತರಿದ್ದರು.