
ಕಾರ್ಮಿಕ ವರ್ಗದ, ರೈತಾಪಿ ಜನತೆಯ ಜನಸಾಮಾನ್ಯರ ಬದುಕನ್ನು ರಕ್ಷಿಸುವ ರಾಷ್ಟ್ರವ್ಯಾಪಿ ಮುಷ್ಕರವನ್ನು ಬೆಂಬಲಿಸಲು ದ.ಕ. ಜಿಲ್ಲೆಯ ಜನತೆಗೆ ಮನವಿ
ಮಂಗಳೂರು: ದೇಶದ ಸಂಪತ್ತನ್ನು ಸೃಷ್ಠಿಸುವ ಕಾರ್ಮಿಕ ವರ್ಗದ ಧೀರೋದತ್ತ ಹೋರಾಟದ ಮೂಲಕ ಜಾರಿಗೊಂಡ ನೂರಾರು ಕಾನೂನುಗಳಲ್ಲಿ ಅತ್ಯಂತ ಪ್ರಮುಖ 29 ಕಾನೂನುಗಳನ್ನು ದೇಶದ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ 4 ಸಂಹಿತೆಗಳನ್ನಾಗಿ ಮಾಡಲು ಹೊರಟ ನರೇಂದ್ರ ಮೋದಿ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತಾಪಿ ಜನತೆಯ ಜನಸಾಮಾನ್ಯರ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ನಾಳೆ(ಜುಲೈ 9) ದೇಶಾದ್ಯಂತ ಮಹಾಮುಷ್ಕರ ನಡೆಯಲಿದೆ.
ಬ್ರಿಟೀಷರ ಕಾನೂನುಗಳನ್ನು ಬದಲಾಯಿಸುವುದಾಗಿ ದೇಶದ ಕಾರ್ಮಿಕ ವರ್ಗವನ್ನು ಯಾಮಾರಿಸಲು ಹೊರಟ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ 11 ವರ್ಷಗಳ ಕಾಲ ಈ ದೇಶದ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನು ಕಾಪಾಡಿದೆಯೇ ಹೊರತು ರೈತ ಕಾರ್ಮಿಕ ಜನಸಾಮಾನ್ಯರದ್ದಲ್ಲ. ಕೆಲಸದ ಅವಧಿ ಹೆಚ್ಚಳ, ಎಲ್ಲಾ ಸವಲತ್ತುಗಳ ನಾಮಾವಶೇಷ, ಮುಷ್ಕರ ಪ್ರತಿಭಟನೆ ಮಾಡಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲುವಾಸ ಇತ್ಯಾದಿ ಆಕ್ರಮಣಕಾರಿ ನೀತಿಗಳನ್ನು ಜಾರಿಗೊಳಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ದೂಡುವ ಪ್ರಕ್ರಿಯೆಗೆ ಕೇಂದ್ರ ಸರಕಾರ ಹೊರಟಿದೆ. ಇದರ ವಿರುದ್ಧ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು,ಮಧ್ಯಮ ವರ್ಗದ ನೌಕರರ ಸಂಘಟನೆಗಳು ಹಾಗೂ ಸಾಮೂಹಿಕ ಸಂಘಟನೆಗಳು ಒಗ್ಗಟ್ಟಾಗಿ ಸಮರಶೀಲ ಹೋರಾಟಕ್ಕೆ ಅಣಿಯಾಗಿದೆ. ಆದ್ದರಿಂದ ಜುಲೈ 9 ರ ಹೋರಾಟ ಕೇವಲ ಕಾರ್ಮಿಕ ವರ್ಗದ ಪ್ರಶ್ನೆಗಳಲ್ಲ,ಬದಲಾಗಿ ದೇಶವನ್ನು ಉಳಿಸುವ ದೇಶಪ್ರೇಮಿ ಹೋರಾಟ.ರೈತ ಕಾರ್ಮಿಕರು ಜನಸಾಮಾನ್ಯರ ಬದುಕು ಉಳಿದರೆ ದೇಶ ಉಳಿದೀತು.
ದೇಶದ ಸಂಪತ್ತನ್ನು ಉಳಿಸಲಿಕ್ಕಾಗಿ, ಸಾರ್ವಜನಿಕ ಉದ್ದಿಮೆಗಳ ರಕ್ಷಣೆಗಾಗಿ,ರೈತ ಕಾರ್ಮಿಕರ ಹಕ್ಕುಗಳ ಕಾಪಾಡಲು ನಡೆಯಲಿರುವ ಮಹಾಮುಷ್ಕರವನ್ನು ದ.ಕ. ಜಿಲ್ಲೆಯ ಜನತೆ ಪಕ್ಷಭೇಧ ಮರೆತು ಬೆಂಬಲಿಸಬೇಕು. ಆ ಮೂಲಕ ಬದುಕಿನ ಪ್ರಶ್ನೆ ಮುನ್ನಲೆಗೆ ಬರಬೇಕೇ ಹೊರತು ಕೋಮುದ್ವೇಷದ ವಿಚಾರಗಳಲ್ಲ ಎಂದು ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.