
ನಮ್ಮ ಬೆಳವಣಿಗೆಗೆ ಕಾರಣರಾದ ಹೆತ್ತವರು, ಶಿಕ್ಷಕರಿಗೆ ಋಣಿಯಾಗಿರುವುದರ ಜೊತೆಗೆ ದೇಶಕ್ಕೂ ಒಳಿತು ಮಾಡಬೇಕು: ಶಾಸಕ ಕಾಮತ್
ಮಂಗಳೂರು: ಜೀವನದಲ್ಲಿ ದೊರೆತ ಎಲ್ಲಾ ಅವಕಾಶ ಹಾಗೂ ಅನುಭವಗಳನ್ನು ಬಳಸಿಕೊಂಡು ನಾವು ಬೆಳೆಯಬೇಕು. ನಮ್ಮ ಬೆಳವಣಿಗೆಗೆ ಕಾರಣರಾದ ಹೆತ್ತವರು, ಶಿಕ್ಷಕರಿಗೆ ಋಣಿಯಾಗಿರುವುದರ ಜೊತೆಗೆ ದೇಶಕ್ಕೂ ಒಳಿತು ಮಾಡಬೇಕು ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ. ಡಾ. ಕವಿತಾ ಕೆ.ಆರ್. ಮಾತನಾಡಿ, ಮುಂದಿನ ಮೂರು ವರ್ಷದಲ್ಲಿ ನಿಮಗೆ ಕಲಿಕೆಗೆ ಸಾಕಷ್ಟು ಅವಕಾಶವಿದೆ. ಶಿಕ್ಷಣದ ಜೊತೆಗೆ ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆ ಮೂಲಕ ನಿಮ್ಮ ಮೌಲ್ಯಗಳನ್ನು ಹೆಚ್ಚಿಸಿಕೊಂಡು ರೆಸ್ಯೂಮ್ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣಕ್ಕೆ 35% ವಿದ್ಯಾರ್ಥಿಗಳು ಬರುತ್ತಾರೆ. ಆ ಅವಕಾಶ ನಿಮಗೆ ಸಿಕ್ಕಿದೆ, ಆದುದರಿಮದ ನೀವು ಅದೃಷ್ಟವಂತರು. ಅದರೊಂದಿಗೆ ನಗರದ ಉತ್ತಮ ಕಾಲೇಜನ್ನು ನೀವು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂರು ವರ್ಷ ನಿಮ್ಮ ಜೀವನದ ಗೋಲ್ಡನ್ ಪಿರೆಡ್ ಆಗಿರುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಮಂಗಳೂರು ಬಂದರು ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಜ್ಮತ್ ಆಲಿ ಜಿ. ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸೈಬರ್ ಕ್ರೈಂ ಮತ್ತು ಮಾದಕವಸ್ತು ತಡೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕಾರ ಭಂಡಾರಿ ಎಂ. ವಹಿಸಿ ಶುಭಹಾರೈಸಿದರು.
ಪ್ರಾಧ್ಯಾಪಕರುಗಳಾದ ಡಾ. ಕೃಷ್ಣಪ್ರಭಾ, ಡಾ. ಮಾಲತಿ, ಡಾ. ರಮಕಾಂತ್ ಪುರಾಣಿಕ್, ರಘುಪತಿ, ಡಾ. ಅಶೋಕ್ ಸಿ.ಕೆ., ಸ್ವರ್ಣಮಾಲಿನಿ, ಶಾಂತಿ, ನಯನ ಕುಮಾರಿ, ಡಾ. ಲೋಕೇಶ್‌ನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್ ಸ್ವಾಗತಿಸಿ, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ವಂದಿಸಿದರು.