
ಸಂತ್ರಸ್ತೆಗೆ ಕಾನೂನು ಹೋರಾಟಕ್ಕೆ ನೆರವು
ಮಂಗಳೂರು: ಪುತ್ತೂರಿನ ಬಿಜೆಪಿ ನಾಯಕನ ಪುತ್ರ ಪ್ರೀತಿಯ ನಾಟಕವಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಕಾನೂನಾತ್ಮಕ ಹೋರಾಟದಲ್ಲಿ ಯುವತಿಯ ಕುಟುಂಬಕ್ಕೆ ಸಹಕಾರ ನೀಡುವುದಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿ ಹೇಳಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ. ದಿವಾಕರ ರಾವ್, ಸಂತ್ರಸ್ತೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕೊಲ್ಲಲು ಪ್ರೇರಣೆ ನೀಡಿದ್ದಾರೆನ್ನಲಾದ ಆರೋಪಿಯ ತಂದೆ, ಹಾಗೂ ಸಂತ್ರಸ್ತೆಯ ತಾಯಿ ಆರೋಪಿಸಿದ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಭೂಗತನಾಗಿರುವ ಆರೋಪಿ ಯುವಕ ಸಂತ್ರಸ್ತ ಯುವತಿಯ ಬೇಡಿಕೆಯಂತೆ ಆಯಕೆಯನ್ನು ವಿವಾಹವಾಗಲು ಒಪ್ಪಿಕೊಳ್ಳಬೇಕು. ಸ್ಥಳೀಯ ಶಾಸಕರು ಈ ವಿವಾಹದ ಜವಾಬ್ಧಾರಿ ವಹಿಸಬೇಕು. ಇಲ್ಲವಾದಲ್ಲಿ ಆರೋಪಿಯ ತಂದೆ ಬಿಜೆಪಿಯ ಮುಖಂಡ ಜಗನ್ನಿವಾಸ್ ರಾವ್ ಅವರ ಮನೆಯ ಎದುರು ನ್ಯಾಯ ಬಯಸುವ ಸಂಘಟನೆಗಳನ್ನು ಜತೆಗೂಡಿಸಿಕೊಂಡು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರೆ, ಪ್ರತಿಭಟನೆ, ಬಂದ್ ಮೊದಲಾದ ಪ್ರತಿಭಟನೆ ನಡೆಸುವ ಹಿಂದುತ್ವ ಸಂಘಟನೆಗಳು ವಿಶ್ವಕರ್ಮ ಸಮುದಾಯ ಯುವತಿಗೆ ಆಗಿರುವ ಅನ್ಯಾಯದ ಬಗ್ಗೆ ಯಾಕೆ ಧ್ವನಿ ಎತ್ತಿಲ್ಲ. ಸಂತ್ರಸ್ತೆಯ ತಾಯಿ ಹಿಂದುತ್ವ ಸಂಘಟನೆಗಳ ಮುಖಂಡರ ಬಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದರೂ ಯಾಕೆ ಸಹಕಾರ ನೀಡಿಲ್ಲ ಎಂದವರು ಪ್ರಶ್ನಿಸಿದರು.
ಸಾಮಾಜಿಕ ಹೋರಾಟಗಾರರಾದ ಗೋಪಾಲ್, ಪ್ರೇಮ, ನಿರ್ಮಲ ಉಪಸ್ಥಿತರಿದ್ದರು.