
ಇ ವಾಹನಗಳಿಗೆ ಪರವಾನಿಗೆ ಕಡ್ಡಾಯ
ಮಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಬ್ಯಾಟರಿ ಚಾಲಿತ, ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ವಾಣಿಜ್ಯ ಉದ್ದೇಶಿತ ಇ ವಾಹನಗಳಿಗೆ ಪರವಾನಿಗೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಸಾರಿಗೆ ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 66(3) (ಎನ್)ಪ್ರಕಾರ ಕಲಂ 66(1)ರಡಿ ಪರವಾನಿಗೆ ಪಡೆಯುವುದರಿಂದ 2022ರಿಂದ ಈವರೆಗೆ ವಿನಾಯಿತಿ ನೀಡಲಾಗಿತ್ತು. ಆದರೆ ಆದೇಶವನ್ನು ಹಿಂಪಡೆದಿರುವ ರಾಜ್ಯ ಸಾರಿಗೆ ಇಲಾಖೆ, ಇ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೂ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಶುಲ್ಕ ರಹಿತವಾಗಿ ಪರವಾನಿಗೆ ಮಂಜೂರು ಮಾಡಿ ವಿತರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
2018ರ ಅಕ್ಟೋಬರ್‌ನಲ್ಲಿ ಕೇಂದ್ರ ಭೂಸಾರಿಗೆ ಸಚಿವಾಲಯವು ಬಯೋ ಇಧನ, ಬ್ಯಾಟರಿ ಚಾಲಿತ ವಾಹನಗಳಿಗೆ ಪರ್ಮಿಟ್ ಇಲ್ಲದೆ, ದೇಶದ ಯಾವುದೇ ಭಾಗದಲ್ಲಿ ಸಂಚರಿಸಲು ಅವಕಾಶ ನೀಡಿತ್ತು. ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ಈ ಆದೇಶ ರಾಜ್ಯದಲ್ಲಿ 2022ರ ಜ.1ರಿಂದ ಅನುಷ್ಟಾನಗೊಂಡಿತ್ತು. ಇದರಿದಾಗಿ ಕರಾವಳಿಯಲ್ಲಿ ಬಹು ಮುಖ್ಯವಾಗಿ ದ.ಕ. ಜಿಲ್ಲೆಯಲ್ಲಿ ಇ ಆಟೋ ರಿಕ್ಷಾಗಳು ಮತ್ತು ಇತರ ಆಟೋರಿಕ್ಷಾಗಳ ನಡುವೆ ಗೊಂದಲದ ವಾತಾವರಣ ಸೃಷ್ಟಿಯಾಗಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಸಾರಿಗೆ ಇಲಾಖೆಗೆ ಸಾಕಷ್ಟು ದೂರುಗಳೂ ಈ ಕುರಿತಂತೆ ಸಲ್ಲಿಕೆಯಾಗಿತ್ತು. ಇ ರಿಕ್ಷಾಗಳಿಗೂ ಪರವಾನಿಗೆ ನೀಡಿ ಬಾಡಿಗೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ರಿಕ್ಷಾ ಚಾಲಕರ ನಡುವೆ ಸಾಕಷ್ಟು ಸುತ್ತಿನ ಚರ್ಚೆಯೂ ನಡೆದಿತ್ತು. ಸ್ಥಳೀಯ ಶಾಸಕ ವೇದವ್ಯಾಸ ಕಾಮತ್‌ರವರು ಈ ಬಗ್ಗೆ ವಿಧಾನಸಭೆ ಕಲಾಪದ ವೇಳೆ ಪ್ರಸ್ತಾವಿಸಿದ್ದರೆ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರು ರಿಕ್ಷಾ ಚಾಲಕರ ಬೇಡಿಕೆ ಈಡೇರಿಸುವಂತೆ ಕಲಾಪದ ವೇಳೆ ಆಗ್ರಹಿಸಿದ್ದರು.
ಇದೀಗ ರಾಜ್ಯದ ಸಾರಿಗೆ ಇಲಾಖೆಯು ಈ ಬಗ್ಗೆ ಆದೇಶ ಹೊರಡಿಸಿದ್ದು, ಇದರಂತೆ ಈಗಾಗಲೇ ರಾಜ್ಯಾದ್ಯಂತ ಪರವಾನಿಗೆ ರಹಿತವಾಗಿ ಸಂಚರಿಸುತ್ತಿರುವ ಬ್ಯಾಟರಿ ಚಾಲಿತ, ಮೆಥನಾಲ್ ಹಾಗೂ ಇಥನಾಲ್ ಚಾಲಿತ ವಾಹನಗಳು ಶುಲ್ಕರಹಿತವಾಗಿ ಪರವಾನಿಗೆಯನ್ನು ಪಡೆಯಬೇಕಾಗಿದೆ.