
ಸೋಮೇಶ್ವರ ಪ್ಯುಯೆಲ್ಸ್ & ಎನರ್ಜಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
Thursday, July 3, 2025
ಮಂಗಳೂರು: ತಲಪಾಡಿ ಸಮೀಪದ ಉಚ್ಚಿಲದಲ್ಲಿರುವ ಭಾರತ್ ಪೆಟ್ರೋಲಿಯಂನ ಅಧಿಕೃತ ವಿತರಕರಾಗಿರುವ ಸೋಮೇಶ್ವರ ಪ್ಯುಯೆಲ್ಸ್ & ಎನರ್ಜಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಅಧ್ಯಕ್ಷರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಸೋಮೇಶ್ವರ ಪ್ಯುಯೆಲ್ಸ್ & ಎನರ್ಜಿಯ ವಠಾರದಲ್ಲಿ ಸಿಬ್ಬಂದಿಗಳಿಗೆ, ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಯೋಗ ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ದೇಲಂಪಾಡಿ ಮಾತನಾಡಿ, ಇಂದು ವಿಶ್ವದ ಎಲ್ಲಾ ಜನಾಂಗದವರನ್ನು ಭಾರತೀಯ ಸಂಸ್ಕೃತಿ ಕಲೆಯಾದ ಯೋಗವನ್ನು ಬಲವಾಗಿ ಆಕರ್ಷಿಸುತ್ತಾ ಇದೆ. ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಯೋಗವೆಂಬುದು ಜಗತ್ತಿಗೆ ಒಂದು ಭಾರತದ ದೊಡ್ಡ ಕೊಡುಗೆಯಾಗಿದೆ. ಯೋಗದ ದೈನಂದಿನ ಅಭ್ಯಾಸವು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಯೋಗವು ಸ್ವಯಂ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ, ವೈಯಕ್ತಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸ್ವಯಂ ಪರಿವನ್ನು ಹೆಚ್ಚಿಸುತ್ತದೆ. ಯೋಗವು ಒತ್ತಡದ ಮಟ್ಟ, ನಕಾತಾತ್ಮಕ ಆಲೋಚನೆಗಳು ಮತ್ತು ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಯೋಗವು ಮೂಲತಃ ಆಧ್ಯಾತ್ಮಿಕ ಅನುಶಾಸನ. ಅದು ಮುಖ್ಯವಾಗಿ ಪರಿಷ್ಕೃತ ವಿಜ್ಞಾನ ಆಧಾರಿತವಾಗಿದೆ. ಇದು ಆರೋಗ್ಯಕರ ಜೀವನ ಕಲೆಯ ಮತ್ತು ವಿಜ್ಞಾನ. ಯೋಗ ಎಂಬ ಶಬ್ದ ಸಂಸ್ಕೃತ ಮೂಲಧಾತುವಾದ ಯುಜ್ ಎನ್ನುವುದರಿಂದ ಬಂದಿದ್ದು. ಕೂಡಿಸು ಜೋಡಿಸು ಸೇರಿಸು ಒಂದಾಗಿಸು ಎಂಬ ಅರ್ಥ ಇದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಆವರಿಸುತ್ತದೆ. ಚಿಂತನೆ ಮತ್ತು ಕ್ರಿಯೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಮತ್ತು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ.
ಪೆಟ್ರೋಲ್ ಪಂಪ್ ಸಿಬ್ಬಂದಿಗಳಿಗೆ ಯೋಗವು ಒತ್ತಡ ನಿರ್ವಹಿಸಲು, ದೈಹಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಗಮನ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಮೂಲಕ ಪ್ರಯೋಜನಕಾರಿಯಾಗಿದೆ. ಕೆಲಸಕ್ಕೆ ಸಂಬಂಧಿಸಿದ ದೈಹಿಕ ಹಾಗೂ ಮಾನಸಿಕ ಆಯಾಸವನ್ನು ಎದುರಿಸಲು ಕೆಲಸದ ದಿನದಲ್ಲಿ ಸರಳವಾದ ಸ್ಟ್ರೆಚಿಂಗ್‌ಗಳು, ಪ್ರಾಣಾಯಾಮ, ಯೋಗಾಸನಗಳು ಮತ್ತು ಸಾವಧಾನತೆಯ ಚಲನೆಯನ್ನು ಸೇರಿಸಿಕೊಳ್ಳಬಹುದು ಎಂದು ತಿಳಿಸಿದರು.
ದೇಲಂಪಾಡಿ ಪ್ರತಿಷ್ಠಾನದ ಯೋಗ ಶಿಕ್ಷಕರಾದ ಸುಮಾ, ಕಾರ್ತಿಕ್, ವೀಣಾ, ದೇವಿಪ್ರದಾ ಮತ್ತು ರೋಶನಿ ಶೆಣೈ ಸಹಕರಿಸಿದರು.