ಮುಂದುವರೆದ ಪಾಲಿಕೆ ನೌಕರರ ಮುಷ್ಕರ: ಜನ ಸಾಮಾನ್ಯರ ಪರದಾಟ

ಮುಂದುವರೆದ ಪಾಲಿಕೆ ನೌಕರರ ಮುಷ್ಕರ: ಜನ ಸಾಮಾನ್ಯರ ಪರದಾಟ


ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರಿನ ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಪಾಲಿಕೆ ನೌಕರರು ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವೂ ಮುಂದುವರಿಸಿದ್ದಾರೆ.

ಪಾಲಿಕೆಯ ನೌಕರರು ಧರಣಿಯಲ್ಲಿ ಭಾಗವಹಿಸುತ್ತಿರುವುದರ ಪರಿಣಾಮವಾಗಿ ಪಾಲಿಕೆಯ ಸೇವೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಪಾಲಿಕೆಯಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ದೂರದಿಂದ ಆಗಮಿಸುವ ಸಾರ್ವಜನಿಕರು ಕೆಲಸವಾಗದೆ ಹಿಂದಿರುಗುತ್ತಿರುವ ದೃಶ್ಯ ಶುಕ್ರವಾರವೂ ಕಂಡು ಬಂತು. 

ಗುರುವಾರದಿಂದ ಆರಂಭಗೊಂಡಿರುವ ಧರಣಿಗೆ ಪೌರ ಕಾರ್ಮಿಕರು ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಸಮಸ್ಯೆಯಾಗಿತ್ತು. ಶುಕ್ರವಾರ ಪೌರ ಕಾರ್ಮಿಕರಿಂದ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದೆ. 

ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ, ನಗರ ಯೋಜನೆ, ಆಶ್ರಯ, ಆರೋಗ್ಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳ ನೌಕರರು ಧರಣಿ ನಡೆಸುತ್ತಿದ್ದಾರೆ. ಸುಮಾರು 400ಕ್ಕೂ ಅಧಿಕ ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದು, ಪಾಲಿಕೆ ಕಚೇರಿ ಕೆಲಸಗಳು ಸ್ಥಗಿತಗೊಂಡಿವೆ. 

2011ರ ಬಳಿಕ 14 ವರ್ಷಗಳಿಂದ ಸಿಅಂಡ್‌ಆರ್ ರೂಲ್ಗೆ ತಿದ್ದುಪಡಿಯಾಗಿಲ್ಲ. 35-36 ವರ್ಷ ಕಾರ್ಯನಿರ್ವಹಿಸಿದವರು ಬಡ್ತಿ ರಹಿತವಾಗಿ ನಿವೃತ್ತಿ ಹೊಂದುವಂತಾಗಿದೆ. ಇಲ್ಲಿ ದುಡಿಯುವ ನೌಕರರಿಗೆ ಸೇವಾ ಭದ್ರತೆ ಇಲ್ಲ. ಆರೋಗ್ಯ ಸಂಜೀವಿನಿ ಹಿರಿಯ ಅಧಿಕಾರಿಗಳಿಗೆ ಮಾತ್ರ ಇದೆ, ನೌಕರರಿಗೆ ಇಲ್ಲ ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಯುತ್ತಿದೆ. 

ಗುರುವಾರ ಸಂಜೆಯ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ದೀಪಾ ಚೋಳನ್ ರಿಗೆ ಕರೆ ಮಾಡಿ, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸಭೆ ಕರೆಯುವಂತೆ ಸಲಹೆ ನೀಡಿದರು.

ಅಬಾಧಿತ..

ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಹೊರಗುತ್ತಿಗೆ ನೌಕರರ ಮೂಲಕ ಕಾರ್ಯ ನಿರ್ವಹಿಸುವ ‘ಮಂಗಳೂರು ವನ್’ ಕೇಂದ್ರದಲ್ಲಿ ಸೇವೆ ಅಬಾಧಿತವಾಗಿದ್ದು, ವಿವಿಧ ರೀತಿಯ ಶುಲ್ಕ ಪಾವತಿ ಕಾರ್ಯ ನಡೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article