
ಉದ್ಯೋಗ ವಂಚನೆ ಪ್ರಮುಖ ಆರೋಪಿ ಸೆರೆ
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು ನಾಲ್ಕು ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಗಳನ್ನು ಮುಂಬೈಯಲ್ಲಿ ಬಂಧಿಸಲಾಗಿದ್ದು, ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಮಂಗಳೂರಿನ ಸುಮಾರು 300 ಮಂದಿ ಅಮಾಯಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಅವರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ್ದರು.
ಪ್ರಕರಣ ಬೆನ್ನುಹತ್ತಿದ ಪೊಲೀಸರ ತಂಡ ಆರೋಪಿಗಳನ್ನು ಮುಂಬೈಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಮಂಗಳೂರಿನ ಉತ್ತರ ಪೊಲೀಸ್ ಠಾಣೆ ಮತ್ತು ಮುಂಬೈಯ ನವೀ ಮುಂಬೈ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆಕ್ಟ್‌ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ. ಈ ಪ್ರಕರಣದಡಿ ಕೇಸು ದಾಖಲಿಸಿದರೆ ಬೇಲ್ ಸಿಗುವುದು ಅಷ್ಟು ಸುಲಭವಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಎಚ್ಚರವಿರಲಿ..:
ಯಾರೂ ಕೂಡ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ, ದೂರವಿರಬೇಕು. ಎರಡು ಅಪರಾಧ ಪ್ರಕರಣ ದಾಖಲಾದವರ ವಿರುದ್ಧ ಮುಂದೆ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕೇಸು ದಾಖಲಿಸಿ ಬೇಲ್ ಸಿಗದಂತೆಮಾಡುವುದರೊಂದಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.