
ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವ: ಕೂಡಲೇ ಸಮಸ್ಯೆ ನಿವಾರಣೆಗೆ ತುರ್ತುಕ್ರಮ ಕೈಗೊಳ್ಳುವಂತೆ ಆಗ್ರಹ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವ ಉಂಟಾಗಿರುವ ಕಾರಣದಿಂದಾಗಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಕೆಲಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸಮಸ್ಯೆ ನಿವಾರಣೆಗೆ ತುರ್ತುಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಲ್ಯುಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಡಬ್ಲ್ಯುಎಫ್‌ಐ ಅಧ್ಯಕ್ಷ ವಸಂತ ಆಚಾರಿ ಅವರು ಕೆಂಪು ಕಲ್ಲು ಮತ್ತು ಮರಳು ಸಿಗದ ಕಾರಣದಿಂದಾಗಿ ಜನಸಾಮಾನ್ಯರು ಮನೆ ಕಟ್ಟುವ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ. ಕಟ್ಟಡ ಮತ್ತು ನಿರ್ಮಾಣ ರಂಗದ ಕಚ್ಚಾ ವಸ್ತುಗಳ ಅಭಾವದಿಂದಾಗಿ ಪರೋಕ್ಷವಾಗಿ ಲಾರಿಗಳಲ್ಲಿ ದುಡಿಯುವ ಕಾರ್ಮಿಕರು, ಅಂಗಡಿ-ಮುಗ್ಗಟ್ಟುಗಳ ಮಾಲೀಕರು, ಕೆಲಸಗಾರರು, ಇತರೆ ವ್ಯಾಪಾರಿವರ್ಗ ಮತ್ತು ಆರ್ಥಿಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ತೊಂದರೆಗೊಳಗಾಗಿವೆ. ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತದ ಬಾಹ್ಯ ಬೆಂಬಲದ ಪರಿಣಾಮವಾಗಿ ನಡೆಯು ತ್ತಿದ್ದ ಅಕ್ರಮ ದಂಧೆಗಳಿಗೆ ಈಗಿನ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದಾರೆ. ಇದರಿಂದ ಕೆಂಪು ಕಲ್ಲು ಮತ್ತು ಮರಳು ಅಭಾವ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧಿಕಾರಿಗಳ ನೀಡಿರುವ ಪ್ರಕಾರ 2025 ಅಕ್ಟೋಬರ್ 15ರ ವರೆಗೆ ಮರಳುಗಾರಿಕೆಗೆ ನಿಷೇಧವಿರುವ ಕಾರಣ ಎಲ್ಲೂ ಮರಳು ತೆಗೆಯುವಂತಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಮರಳಿನ ಸಂಗ್ರಹವಿದ್ದು ‘ಸ್ಯಾಂಡ್ ಬಜಾರ್’ ಆ?ಯಪ್ ಮೂಲಕ ಮರಳು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸ್ಯಾಂಡ್ ಬಜಾರ್ ಸರಿಯಾಗಿ ತೆರೆಯುತ್ತಿಲ್ಲ. ಬೇರೆ ಬೇರೆ ಕಡೆಗಳಿಂದ ಬರುವ ಮರಳು ಒಂದು ಲೋಡಿಗೆ ರೂ.22 ಸಾವಿರದಷ್ಟು ದುಬಾರಿಯಾಗಿದೆ. ಕೆಂಪು ಕಲ್ಲು ಒಂದಕ್ಕೆ ರೂ.50ಕ್ಕೂ ಮಿಕ್ಕಿ ಏರಿಕೆ ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಕರಾವಳಿ ಜಿಲ್ಲೆಗಳಲ್ಲಿ ಸರಾಗವಾಗಿ ಮತ್ತು ಸರಳವಾಗಿ ಮರಳು ಪೂರೈಕೆಯಾಗುವಂತೆ ಕರಾವಳಿ ಮರಳು ನೀತಿ ರೂಪಿಸಬೇಕು. ಉಡುಪಿಯಲ್ಲಿ ಇಂತಹ ಸಮಸ್ಯೆ ಇಲ್ಲ. ದ.ಕ.ದಲ್ಲಿ ಮಾತ್ರ ಈ ಸಮಸ್ಯೆ ಇದೆ. ಪರಿಸರ ಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ಧ ಕೆಂಪು ಕಲ್ಲು ಮತ್ತು ಕಪ್ಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು.
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು ಮತ್ತು ಜಲ್ಲಿ ಸಿಗುವಂತಾ ಗಬೇಕು. ಜನಸಾಮಾನ್ಯರಿಗೆ ಮನೆ ಕಟ್ಟಲು ಬೇಕಾಗುವ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡೆ ತಡೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಕಳೆದ ಒಂದು ತಿಂಗಳಿನಿಂದ ಕಟ್ಟಡ ಮತ್ತು ನಿರ್ಮಾಣ ರಂಗದ ಕಾರ್ಮಿಕರು ಕೆಲಸವಿಲ್ಲದೆ ಬಳಲುತ್ತಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಗಳ ಮುಖಾಂತರ ಜಿಲ್ಲಾಡಳಿತ ಸರಕಾರ ಆರ್ಥಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಮಸ್ಯೆ ಬಗೆಹರಿಯುವ ತನಕ ಜಿಲ್ಲೆಯಾದ್ಯಂತ ವಿವಿಧ ಹಂತದ ತೀವ್ರ ತರದ ಹೋರಾಟ ನಡೆಸಲು ತಮ್ಮ ಸಂಘಟನೆ ನಿರ್ಧರಿಸಿದೆ. ಜುಲೈ 14ರಂದು ಸಂಜೆ 5ಕ್ಕೆ ಮಂಗಳೂರಿನ ಮಿನಿ ವಿಧಾನಸೌಧಧ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲು ನಿರ್ಣಯಿಸಿದೆ. ಉಳ್ಳಾಲ ತಹಶೀಲ್ದಾರರ ಕಚೇರಿ, ಗುರುಪುರ ಕೈಕಂಬ, ಮೂಡಬಿದ್ರಿ, ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳದಲ್ಲಿ ತೀವ್ರ ತರದ ಹೋರಾಟ ನಡೆಸಲು ನಿರ್ಣಯಿಸಿದೆ ಎಂದು ವಸಂತ ಆಚಾರಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಲ್ಯುಎಫ್‌ಐ )ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಡಬ್ಲ್ಯುಎಫ್‌ಐ ಜಿಲ್ಲಾ ಖಜಾಂಚಿ ರವಿಚಂದ್ರ ಕೊಂಚಾಡಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.