ಕೊಲ್ಲೂರು: ಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠದ ನಿರ್ದೇಶನ-4 ವಾರದ ಒಳಗೆ ನಿರ್ದೇಶನ ಪಾಲಿಸಲು ಜಿಲ್ಲಾಡಳಿತಕ್ಕೆ ಸೂಚನೆ

ಕೊಲ್ಲೂರು: ಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠದ ನಿರ್ದೇಶನ-4 ವಾರದ ಒಳಗೆ ನಿರ್ದೇಶನ ಪಾಲಿಸಲು ಜಿಲ್ಲಾಡಳಿತಕ್ಕೆ ಸೂಚನೆ


ಕುಂದಾಪುರ: ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ, ಪರಿಸರ ನಾಶ ಹಾಗೂ ಭೂ ಅತಿಕ್ರಮಣಗಳ ವಿರುದ್ಧ ದಾಖಲಾಗಿರುವ ದೂರು ಅರ್ಜಿಯ ವಿಚಾರಣೆ ನಡೆಸುತ್ತಿರುವ ಚಿನೈಯಲ್ಲಿನ ಸರ್ವೋಚ್ಚ ನ್ಯಾಯಾಲಯದ ದಕ್ಷಿಣ ವಲಯದ ಹಸಿರು ಪೀಠ ಕೊಲ್ಲೂರು ಪರಿಸರದ ಮಾಲಿನ್ಯ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮಹತ್ತರವಾದ ನಿರ್ದೇಶನ ನೀಡಿದೆ ಎಂದು ಅರ್ಜಿದಾರ ಹರೀಶ್ ತೋಳಾರ್ ಕೊಲ್ಲೂರು ತಿಳಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸುತ್ತಿರುವ ಹಸಿರು ಪೀಠದ ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಜೆಎಂ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪತಿ ಇಎಂ ಅವರುಗಳು ಜು.9 ರಂದು ನೀಡಿರುವ ನಿರ್ದೇಶನದಲ್ಲಿ ನಿಯಮ ಉಲ್ಲಂಘಕರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.


ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಹೆಸರಿಸಲಾದವರು ಮತ್ತು ನಂತರ ಕಂಡು ಬಂದ ಇತರರನ್ನು ಒಳಗೊಂಡಂತೆ ಎಲ್ಲಾ ನಿಯಮ ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಎಸ್‌ಪಿಸಿಬಿ (ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ಕಾನೂನು ಕ್ರಮ ಜರುಗಿಸಬೇಕು. ಎಸ್‌ಟಿಪಿ ಗಳನ್ನು ತಕ್ಷಣದ ಪುನಃ ಸ್ಥಾಪನೆಯಾಗಬೇಕು ಹಾಗೂ ಆದ್ಯತೆಯಲ್ಲಿ ಎಸ್‌ಟಿಪಿ ಗಳನ್ನು  ಕಾರ್ಯಗತಗೊಳಿಸಬೇಕು.

ಜಿಲ್ಲಾಧಿಕಾರಿಗಳು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಗ್ರಾಮೀಣ ನೀರು ಸರಬರಾಜು ಮಂಡಳಿ ಹಾಗೂ ಎಲ್ಲಾ ವಾಣಿಜ್ಯ ಘಟಗಳೊಂದಿಗೆ 

ಸಮನ್ವಯ ಸಾಧಿಸಬೇಕು. ಗೃಹ ಮತ್ತು ವಾಣಿಜ್ಯ ಯುಜಿಡಿ ಸಂಪರ್ಕಗಳು ಪೂರ್ಣಗೊಂಡಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಸಿರು ಪೀಠ ನೀಡಿರುವ ನಿರ್ದೇಶನ ಹಾಗೂ ಸೂಚನೆಗಳನ್ನು ಪಾಲಿಸಲು 4 ವಾರಗಳ ಸಮಯವನ್ನು ನಿಗದಿ ಮಾಡಲಾಗಿದ್ದು, ನಿರ್ದೇಶನದ ಕಾರ್ಯಪಾಲನೆಗೆ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ ಎಂದು ತೋಳಾರ್ ತಿಳಿಸಿದ್ದಾರೆ.

ಹಸಿರು ಪೀಠಕ್ಕೆ ಅರ್ಜಿ: 

ಕೊಲ್ಲೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಲೆ ಎತ್ತುತ್ತಿರುವ ವಸತಿ ಗ್ರಹಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಆಗುತ್ತಿರುವ ಜಲ ಹಾಗೂ ಪರಿಸರದ ಮಾಲಿನ್ಯದಿಂದಾಗಿ ಪುಣ್ಯ ಕ್ಷೇತ್ರಕ್ಕೆ ಬರುವ ಕೋಟ್ಯಾಂತರ ಭಕ್ತರಿಗೆ, ಪುಣ್ಯ ನದಿಯಲ್ಲಿ ಆಶ್ರಯ ಪಡೆದುಕೊಂಡಿರುವ ಅಮೂಲ್ಯ ಜಲಚರಗಳು, ನೀರಿನಾಶ್ರಯಕ್ಕೆ ಅವಲಂಬಿತವಾಗಿರುವ ಪ್ರಾಣಿ ಸಂಕುಲನಗಳ ಭವಿಷ್ಯದ ರಕ್ಷಣೆ, ಕೊಲ್ಲೂರು ಹಾಗೂ ಆಸುಪಾಸಿನ ಗ್ರಾಮಗಳ ಆರೋಗ್ಯ ರಕ್ಷಣೆ ಮತ್ತು ಸರ್ಕಾರಿ ಹಾಗೂ ದೇವಸ್ಥಾನದ ಭೂಮಿಗಳ ಅತಿಕ್ರಮಣಗಳನ್ನು ತಡೆಯುವ ಉದ್ದೇಶಗಳನ್ನು ಇರಿಸಿಕೊಂಡು ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು, ಮಂಗಳೂರಿನ ಎನ್‌ಇಸಿಎಫ್ ಹಾಗೂ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸೊಸೈಟಿ ಮಂಗಳೂರು ಇವರುಗಳು 2022 ರಲ್ಲಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, 2024 ರಲ್ಲಿ ಅರ್ಜಿ ವಿಚಾರಣೆಗೆ ಅಂಗೀಕಾರ ನೀಡಿದ್ದ ದಕ್ಷಿಣ ವಲಯ ಹಸಿರು ಪೀಠ, 25/2024 (ಎಸ್‌ಝಡ್) ಸಂಖ್ಯೆಯಲ್ಲಿ ವಿಚಾರಣೆ ನಡೆಸುತ್ತಿದೆ.

ನ್ಯಾಯಾಲಯದ ಮಧ್ಯಂತರ ನಿರ್ದೇಶನದ ಬಗ್ಗೆ ಸಂತೋಷ್ ವ್ಯಕ್ತಪಡಿಸಿರುವ ಅರ್ಜಿದಾರರು, ಮುಂದುವರೆಯುವ ವಿಚಾರಣೆಯ ಹಂತದಲ್ಲಿ ಪುಣ್ಯ ನದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪರಿಸರ  ನಾಶ, ನದಿ ಮುಖಜ ಭೂಮಿಗಳ ಆಕ್ರಮ ಒತ್ತುವರಿ, ಸರ್ಕಾರಿ, ದೇವಸ್ಥಾನ ಹಾಗೂ ಸಾರ್ವಜನಿಕ ಭೂಮಿಗಳ ಅನಧಿಕೃತ ಅತಿಕ್ರಮಣ ಹಾಗೂ ಪರಭಾರೆ, ನಿಯಮ ಬಾಹಿರ ಕಟ್ಟಡ ನಿರ್ಮಾಣ ಹಾಗೂ ಭಕ್ತರ ಪವಿತ್ರ ಭಾವನೆಗಳಿಗೆ ನಿರಂತರವಾಗಿ ಆಗುತ್ತಿರುವ ಘಾಸಿಗಳು ಸೇರಿದಂತೆ ಕ್ಷೇತ್ರದ ಪಾವಿತ್ರ್ಯ ನಾಶ, ಅತಿಕ್ರಮಣ, ಪರಿಸರ ನಾಶ ಹಾಗೂ ಕಾನೂನು ಉಲ್ಲಂಘನೆಗಳ ಕುರಿತು ಘನ ನ್ಯಾಯಾಲಯಕ್ಕೆ ದಾಖಲೆಗಳ ಸಹಿತ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article