ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ನಿಷ್ಪಕ್ಷಪಾತ ತನಿಖೆ, ದೂರುದಾರ ಹಾಗೂ ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಲು ಸಿಪಿಐಎಂ ಆಗ್ರಹ

ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ನಿಷ್ಪಕ್ಷಪಾತ ತನಿಖೆ, ದೂರುದಾರ ಹಾಗೂ ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಲು ಸಿಪಿಐಎಂ ಆಗ್ರಹ

ಮಂಗಳೂರು: "ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ  ಹತ್ಯೆಗಳು, ಅತ್ಯಾಚಾರಗಳು ಸರಣಿಯಾಗಿ ನಡೆದಿದೆ, ನನ್ನಿಂದಲೆ ಈ ಶವಗಳನ್ನು ಹೂತು ಹಾಕಿಸಿದ್ದಾರೆ, ವಿಲೆವಾರಿ ಮಾಡಿಸಿದ್ದಾರೆ. ನಾನು ಧರ್ಮಸ್ಥಳ ದೇವಸ್ಥಾನದ ಆಡಳಿತದಡಿ ಆ ಸಂದರ್ಭ ನೈರ್ಮಲ್ಯ ಕಾರ್ಮಿಕನಾಗಿದ್ದೆ" ಎಂದು ಗುರುತು ಮರೆಮಾಚಲ್ಪಟ್ಟ ವ್ಯಕ್ತಿಯೋರ್ವ ವಕೀಲರುಗಳ ಉಪಸ್ಥಿತಿಯಲ್ಲಿ ದೂರು ದಾಖಲಿಸಿರುವ ಪ್ರಕರಣ ಸಾರ್ವಜನಿಕ ವಲಯದಲ್ಲಿ ಕಂಪನಗಳನ್ನು ಎಬ್ಬಿಸಿದೆ ಇದು ಭೀತಿಗೆ ಕಾರಣವಾಗಿದೆ. 

ಈ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ ಹಾಗೂ ಆಸುಪಾಸು ಪತ್ತೆಯಾಗಿದ್ದ ಅನುಮಾನಾಸ್ಪದ, ಸಾಲು ಸಾಲು ಅನಾಥ ಶವಗಳು, ಆ ಕುರಿತು ಸಾರ್ವಜನಿಕವಾಗಿ ವ್ಯಕ್ತವಾಗಿದ್ದ ಅನುಮಾನಗಳಿಗೆ ಈಗಿನ ಆರೋಪಗಳು ಪುಷ್ಟಿ ನೀಡಿವೆ. ಈ ದೂರಿನ ಕುರಿತು ರಾಜ್ಯ ಸರಕಾರ ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಬೇಕು, ದೂರುದಾರ ಹಾಗು ಆತನ ಜೊತೆಗಿರುವ ನ್ಯಾಯವಾದಿಗಳಿಗೆ ಭದ್ರತೆ ಒದಗಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

ಧರ್ಮಸ್ಥಳದಲ್ಲಿ 80 ರ ದಶಕದಲ್ಲಿ ನಡೆದ ವಿದ್ಯಾರ್ಥಿನಿ ಪದ್ಮಲತಾ ಅಪಹರಣ, ಕೊಲೆ ಪ್ರಕರಣದ ಸಂದರ್ಭದಲ್ಲೆ ದೊಡ್ಡ ಹೋರಾಟ ನಡೆದಿತ್ತು. ಆದರೆ, ಆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿತ್ತು. ಆ ತರುವಾಯ ಇಂತಹ ಹಲವು ಕೊಲೆ, ಅನುಮಾನಾಸ್ಪದ, ಅಸಹಜ ಸಾವುಗಳು ಧರ್ಮಸ್ಥಳ ಸುತ್ತಮುತ್ತ ವರದಿಯಾಗುತ್ತಲೆ ಬಂದಿವೆ. ಹನ್ನೆರಡು ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ, ಅಪಹರಣ ಪ್ರಕರಣ ಅದರಲ್ಲಿ ತೀರಾ ಇತ್ತೀಚಿನದ್ದು, ಅದಕ್ಕಿಂತ ಸ್ವಲ್ಪ ಮೊದಲು ನಡೆದ ಆನೆ ಮಾವುತ ಹಾಗೂ ಆತನ ಸೋದರಿಯ ಹತ್ಯೆ ಪ್ರಕರಣದಲ್ಲೂ ಕೊಲೆಗಾರರ ಪತ್ತೆ ಆಗಿಲ್ಲ ಎಂಬುದು ಗಮನಾರ್ಹ. 

ಸೌಜನ್ಯ ಪ್ರಕರಣದ ಸಂದರ್ಭದಲ್ಲಿ ಮಾಹಿತಿ ಹಕ್ಕಿನಡಿ ಪೊಲೀಸ್ ಇಲಾಖೆ ನೀಡಿದ ಮಾಹಿತಿ ಪ್ರಕಾರವೆ  ದಶಕದ ಅವಧಿಯಲ್ಲಿ ಧರ್ಮಸ್ಥಳ, ಉಜಿರೆ ಗ್ರಾಮ ವ್ಯಾಪ್ತಿಯಲ್ಲಿ 416 ಹೆಚ್ಚು ಅಸಹಜ ಸಾವು, ಅನಾಥ ಶವಗಳು ಪತ್ತೆಯಾಗಿದ್ದವು ಎಂದು ವರದಿಯಾಗಿತ್ತು‌. ಇದು ರಾಜ್ಯಾದ್ಯಂತ ಆತಂಕ, ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಪದ್ಮಲತಾ ಪ್ರಕರಣದಿಂದ ಹಿಡಿದು ಆನೆ ಮಾವುತ, ಆತನ ಸೋದರಿ, ಸೌಜನ್ಯ ಪ್ರಕರಣದ ವರೆಗೂ ದೊಡ್ಡ ಪ್ರಮಾಣದ ಹೋರಾಟಗಳ ಹೊರತಾಗಿಯು ಕೊಲೆಗಾರರ ಪತ್ತೆ ಅಸಾಧ್ಯವಾಗಿರುವುದು, ನೂರಾರು ಅನಾಥ ಶವಗಳು, ಅಸಹಜ ಸಾವುಗಳು ಆ ಸಣ್ಣ ಪ್ರದೇಶವೊಂದರಲ್ಲೆ ನಡೆದಿರುವುದು ನಿಗೂಢ ವಿದ್ಯಾಮಾನಗಳ ಅನುಮಾನ ಜನರಲ್ಲಿ ಸಹಜವಾಗಿ ಮೂಡಿಸಿತ್ತು. ಸರಕಾರ ಬಲಾಢ್ಯ, ಊಳಿಗಮಾನ್ಯ ಶಕ್ತಿಗಳ ನಿಯಂತ್ರಣಕ್ಕೆ ಒಳಗಾಗಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದೆ ಎಂದು ಪ್ರಬಲ ಆರೋಪಗಳೂ ಜನತೆಯಿಂದ ವ್ಯಕ್ತವಾಗಿದ್ದವು‌.

ಇದೀಗ, ಇಂತಹ ಆರೋಪಗಳಿಗೆ ಪುಷ್ಟಿ ನೀಡುವಂತೆ, ಧರ್ಮಸ್ಥಳದಲ್ಲಿ ಕಾರ್ಮಿಕನಾಗಿದ್ದೆ ಎಂದು ಸ್ವಯಂ ಘೋಷಿಸಿ ಕೊಂಡಿರುವ ವ್ಯಕ್ತಿಯೋರ್ವ, "ತನ್ನಿಂದ ಇಂತಹ ಅನಾಥ ಹೆಣಗಳನ್ನು ಬೆದರಿಸಿ ಹೂತು ಹಾಕಿಸುವ, ವಿಲೇವಾರಿ ಮಾಡಿಸುವ ಕಾರ್ಯ ನಡೆದಿತ್ತು, ನನಗೆ ಹಾಗು ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಿದರೆ, ಎಲ್ಲವನ್ನೂ ಸಾಕ್ಷ್ಯ ಸಮೇತ ಬಯಲುಗೊಳಿಸುವೆ" ಎಂದು ಪೊಲೀಸ್ ದೂರು ನೀಡಿದ್ದಾರೆ‌‌. ರಾಜ್ಯ ಸರಕಾರ ಈ ದೂರನ್ನು ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ಬಲಾಢ್ಯ ಲಾಭಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಈ ಪ್ರಕರಣದ ಎಲ್ಲಾ ಆಯಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು, ದೂರುದಾರನಿಗೆ ಹಾಗು ಆತನ ಪರ ನ್ಯಾಯವಾದಿಗಳಿಗೆ ಗರಿಷ್ಟ ಭದ್ರತೆ ಒದಗಿಸಬೇಕು ಎಂದು ಸಿಪಿಐಎಂ  ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article