
ನಾಳೆ ಕರಾವಳಿಯಲ್ಲಿ ಆರೆಂಜ್ ಅಲರ್ಟ್
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಭಾನುವಾರ ಕರಾವಳಿಯಲ್ಲಿ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿದ್ದು, ದ.ಕ. ಜಿಲ್ಲೆಯಲ್ಲಿ ದಿನವಿಡೀ ಹಗುರದಿಂದ ಉತ್ತಮ ಮಳೆ ಮುಂದುವರಿದಿದೆ. ಜು.21ಹಾಗೂ 22ರಂದು ಭಾರತೀಯ ಹವಾಮಾನ ಇಲಾಖೆ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಬೆಳಗ್ಗಿನ ವರೆಗೆ ಹಗುರದಲ್ಲಿ ಮಳೆ ಸುರಿದಿದೆ. ಬೆಳಗ್ಗೆಯೂ ಮಳೆ ಮುಂದುವರಿದಿದ್ದು, ಮಧ್ಯಾಹ್ನ ಮಳೆ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸಂಜೆ ಮತ್ತೆ ಮಳೆ ಕಾಣಿಸಿದೆ. ಕರಾವಳಿಯಲ್ಲಿ ಸೊಮವಾರ ಆರೆಂಜ್ ಅಲರ್ಟ್ ಇದ್ದು, ಬಹುತೇಕ ಕಡೆಗಳಲ್ಲಿ ಮಳೆ ಇರಲಿದೆ.
ದ.ಕ. ಜಿಲ್ಲೆಯ ಬೆಳ್ತಂಗಡಿ , ಸುಳ್ಯ, ಬಂಟ್ವಾಳ ಹಾಗೂ ಪುತ್ತೂರುಗಳಲ್ಲಿ ಇಡೀ ದಿನ ಹಗುರ ಮಳೆ ಸುರಿದಿದೆ. ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ನಸುಕಿನ ಜಾವದಿಂದಲೇ ಮಳೆ ಕಾಣಿಸಿದೆ. ಇದು ಆಗಾಗ ಹಗುರ ಪ್ರಮಾಣದಲ್ಲಿ ಇಡೀ ದಿನ ಸುರಿಯತೊಡಗಿದೆ. ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರಲ್ಲಿ ದಿನವಿಡೀ ಮೋಡ, ಆಗಾಗ ತುಂತುರು ಮಳೆಯಾಗಿದೆ. ಬಂಟ್ವಾಳ ಮತ್ತು ಸುಳ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು ಜಿಲ್ಲೆಯಲ್ಲಿ ಮತ್ತು ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕು ಸ್ವಲ್ಪ ಕಡಿಮೆ ಇದ್ದರೂ, ಮಧ್ಯಾಹ್ನ ನಂತರ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿಯ ತಗ್ಗುಪ್ರದೇಶದಲ್ಲಿ ಮಳೆ ಇಳಿಕೆಯಾದರೂ ಘಾಟ್ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ನದಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿಲ್ಲ. ಮಳೆಯಿಂದಾಗಿ ತುಂಬೆ ಡ್ಯಾಂ ಸೇರಿದಂತೆ ನೇತ್ರಾವತಿ ಉಪ್ಪಿನಂಗಡಿ ಭಾಗದಲ್ಲಿ ನೀರಿನ ಮಟ್ಟದಲ್ಲಿ ದೊಡ್ಡ ಮಟ್ಟಿನ ಏರಿಕೆಯಾಗಿದೆ.
ಬಂಟ್ವಾಳದಲ್ಲಿ ಅತೀ ಹೆಚ್ಚು ಮಳೆ:
ದ.ಕ. ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗಿನವರೆಗೆ 56 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯಲ್ಲೆ ಅತೀ ಹೆಚ್ಚು ಬಂಟ್ವಾಳದಲ್ಲಿ 68.2 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ 62.6, ಮಂಗಳೂರು 49, ಪುತ್ತೂರು 49, ಸುಳ್ಯ 61, ಮೂಡುಬಿದಿರೆ 36, ಕಡಬ 648.4, ಮೂಲ್ಕಿ 26.6, ಉಳ್ಳಾಲ 53.7 ಮಿ.ಮೀ. ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 45ಕಿ.ಮೀ ನಿಂದ 47ಕಿ.ಮೀ ವರೆಗೆ ಹೆಚ್ಚಳವಾಗಿರುವುದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜತೆಗೆ ಸಮುದ್ರ ಆಸುಪಾಸಿನ ನಿವಾಸಿಗಳು ಎಚ್ಚರಿಕೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಾನುವಾರ ಗರಿಷ್ಠ 30.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸೋಮವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ.