ಭಾರತೀಯ ಸೈನಿಕರ ವಿಜಯಗಾಥೆ ನೆನೆಸುವ ದಿನ: ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಭಾರತದ ಸೈನಿಕ ಶಕ್ತಿಯು ಇತಿಹಾಸದಲ್ಲಿ ಯಾವತ್ತೂ ಹೆಮ್ಮೆಪಡುವಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಸೈನ್ಯಕ್ಕೆ ಸಾಂಸ್ಥಿಕ ಬಲವರ್ಧನೆ, ಗೌರವ ಮತ್ತು ಹೊಸ ತಂತ್ರಜ್ಞಾನವನ್ನು ನೀಡಲಾಗಿದೆ. ‘ಒನ್ ರ‍್ಯಾಂಕ್ ಒನ್ ಪೆನ್ಶನ್’ ಯೋಜನೆಯು ಬಹುಕಾಲದ ಬೇಡಿಕೆಯನ್ನೇ ಈಡೇರಿಸಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಇಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್‌ವನ್ನು ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಆಚರಿಸಿದ್ದು, ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಯೋಧರ ಬಲಿದಾನಕ್ಕೆ ಕೃತಜ್ಞತೆಯ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯಾರಾದರೂ ತೀರ್ಥಯಾತ್ರೆ ಹೋಗಬೇಕೆಂದು ಆಸೆಪಟ್ಟರೆ ಅವರು ಕಾರ್ಗಿಲ್‌ಗೆ ಭೇಟಿ ನೀಡಲಿ ಎಂದು ಜನರಲ್ ವಿ.ಪಿ. ಮಲ್ಲಿಕ್ ಅವರು ಹೇಳಿದ್ದನ್ನು ಸ್ಮರಿಸಿದರು. ಅದು ಯೋಧರ ಬಲಿದಾನದ ಪವಿತ್ರ ಧಾಮ ಎಂದು ಉಲ್ಲೇಖಿಸಿದ ಅವರು ಶತ್ರುಗಳು ಬೆಟ್ಟದ ಮೇಲಿನಿಂದ ಗುಂಡು ಹಾರಿಸುತ್ತಿದ್ದ ಪರಿಸ್ಥಿತಿಯಲ್ಲಿ, ನಮ್ಮ ಯೋಧರು ಶೌರ್ಯದಿಂದ ಹೋರಾಡಿ ಪರ್ವತಾರೋಹಣದಂತಹ ಕ್ಲಿಷ್ಟ ಯುದ್ದವನ್ನು ಮಾಡಿ ವಿಜಯವನ್ನು ಸಾಧಿಸಿದರು. ಈ ಬಲಿದಾನ ನೀಡಿದವರಲ್ಲಿ ಬಹುತೇಕ ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಶೂರರು ಎಂದು ಸ್ಮರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಭಾರತೀಯ ಸೇನೆಯು ಭಾರತೀಯತೆಯ ಜೀವಂತ ರೂಪ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದಗಳಿಲ್ಲದೇ ಇವೆಲ್ಲವನ್ನು ಮೀರಿ ರಾಷ್ಟ್ರಪರತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.
ಕಾರ್ಯಕ್ರಮದ ಮೂವರು ನಿವೃತ್ತ ಯೋಧರಾದ ಹವಾಲ್ದಾರ್ ಅಂಬ್ರೋಸ್ ಡಿಸಿಲ್ವಾ, ಹವಾಲ್ದಾರ್ ವಿಶ್ವನಾಥ ಶೆಣೈ, ಹವಾಲ್ದಾರ್ ರವಿರಾಮ್ ಶೆಟ್ಟಿ ಅವರುಗಳಿಗೆ ಗೌರವಪೂರ್ವಕವಾಗಿ ಸನ್ಮಾನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಕೋಷ್ಟಗಳ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಸೈನಿಕ ಪ್ರಕೋಷ್ಟದ ಸಹ ಸಂಚಾಲಕರಾದ ನರೇಶ್ ಪೈ, ಪ್ರಮುಖರಾದ ರಮೇಶ ಕಂಡೆಟ್ಟು, ಸಂಜಯ ಪ್ರಭು, ನಿತಿನ್ ಕುಮಾರ್, ಜಯಾನಂದ ಅಂಚನ್, ಮಾಜಿ ಸೈನಿಕ ಎಸ್.ಕೆ. ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜನೆ ಹಾಗೂ ನಿರೂಪಣೆ ನಿರ್ವಹಣೆಯನ್ನು ಪ್ರಸನ್ನ ದರ್ಬೆ ನಡೆಸಿದರು.