
ಕರಾವಳಿಗಿಂದು ಆರೇಂಜ್ ಅಲರ್ಟ್!: ಇನ್ನೂ ನಾಲ್ಕು ದಿನ ಭಾರೀ ಮಳೆ ಮುನ್ಸೂಚನೆ ನೀಡಿದ ಐಎಂಡಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರವೂ ನಿರಂತರ ಮಳೆ ಮುಂದುವರಿದ್ದು, ಹಲವೆಡೆ ಮನೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಇನ್ನೂ ನಾಲ್ಕು ದಿನ ಭಾರೀ ಮಳೆ ಸುರಿಯುವ ಆರೇಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ.
ಕಾಸರಗೋಡು ಉತ್ತಮ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಸಾಮಾನ್ಯ ಹಾಗೂ ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಎಂದಿನಂತೆ ಮುಂಗಾರು ಮಳೆಯಾಗುತ್ತಿದ್ದರೆ, ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಧ್ಯಮ ಸ್ತರದ ಗಾಳಿ ಹಾಗೂ ಮೋಡಗಳು ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಕಾರಣದಿಂದ ಮಳೆಯಾಗುತ್ತಿದೆ. ಈ ಕಾರಣಕ್ಕಾಗಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಾತ್ರ ಮುಂಗಾರು ಚುರುಕಾಗಿದೆ.
ಶುಕ್ರವಾರ ದಿನವಿಡಿ ಮಳೆ:
ಗುರುವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಶುಕ್ರವಾರ ದಿನವಿಡಿ ಮಳೆ ಹನಿಯುತ್ತಲೇ ಇತ್ತು. ಜಿಲ್ಲಾದ್ಯಂತ ಚಳಿಯ ವಾತಾವರಣ ಕಂಡುಬಂದಿದೆ. ಸತತ ಮಳೆಯಿಂದಾಗಿ ಅಡುಮರೋಳಿ ಶೋಭಾ ಶೆಟ್ಟಿ ಎಂಬವರ ಮನೆಯ ಎತ್ತರದ ಕಾಂಪೌಂಡ್ ಕುಸಿದು ಅಪಾರ ನಷ್ಟ ಉಟಾಗಿದೆ. ಅಲ್ಲದೆ, ಪಾಂಪು ಮನೆ, ಸುಶಾಂತ್ ಪೂಜಾರಿ, ಮಹಾಬಲ ಎಂಬವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮುದ್ರದಲ್ಲಿ ಗಾಳಿ ಪ್ರಮಾಣ ಏರಿಕೆ:
ಪಶ್ಚಿಮಘಟ್ಟದ ತಳಭಾಗಗಳಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದ್ದು, ಮುಂದಿನ ಒಂದಡೆರು ದಿನ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 30.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶನಿವಾರ ವೇಳೆ ತುಸು ಏರಿಕೆ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35ಕಿ.ಮೀ ನಿಂದ 40ಕಿ.ಮೀ ವರೆಗೆ ಹೆಚ್ಚಳವಾಗಿರುವುದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜತೆಗೆ ಸಮುದ್ರ ಆಸುಪಾಸಿನ ನಿವಾಸಿಗಳು ಎಚ್ಚರಿಕೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ.
ದ.ಕ 23ಮಿಮೀ ಸರಾಸರಿ ಮಳೆ ದಾಖಲು:
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 23 ಮಿಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 7 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಬೆಳ್ತಂಗಡಿಯಲ್ಲಿ 17.8 ಮಿಮೀ, ಬಂಟ್ವಾಳ 32.2 ಮಿಮೀ, ಮಂಗಳೂರು 28.1 ಮಿಮೀ, ಪುತ್ತೂರು 42.7 ಮಿಮೀ, ಸುಳ್ಯ 18.9 ಮಿಮೀ, ಮೂಡುಬಿದಿರೆ 19.7 ಮಿಮೀ, ಕಡಬ 12.7 ಮಿಮೀ, ಮೂಲ್ಕಿ 19.9 ಮಿಮೀ, ಉಳ್ಳಾಲದಲ್ಲಿ 29.3 ಮಿಮೀ ಮಳೆಯಾಗಿದೆ.