
ಸಿಗಂದೂರು ಲಾಂಚ್ ಕುಂದಾಪುರಕ್ಕೆ-ಜನಪ್ರತಿನಿಧಿಗಳಿಗೆ ಜನರ ಒತ್ತಾಯ
ಕುಂದಾಪುರ: ಬಹುದೀರ್ಘ ಕಾಲದ ಜನರ ಬೇಡಿಕೆಯಾದ ಅಂಬಾರಕೊಡ್ಲು ಕಳಸವಳ್ಳಿ ಸಂಪರ್ಕಿಸುವ ಸಿಗಂದೂರು ಸೇತುವೆ ಇದೀಗ ಲೋಕಾರ್ಪಣೆಗೊಂಡಿದೆ. ಇದುವರೆಗೆ ಅಲ್ಲಿ ಅಂಬಾರ ಕೊಡ್ಲು- ಕಳಸವಳ್ಳಿಗಳ ನಡುವೆ ಸಂಪರ್ಕ ಕಲ್ಪಿಸುತ್ತಾ ಸುಮಾರು ಎರಡು ಕಿ ಮೀ ದೂರದ ನದಿ ದಾಟಲು ಇದ್ದಿದ್ದ ಲಾಂಚ್ ವ್ಯವಸ್ಥೆ ಸ್ಥಗಿತಗೊಂಡಿದೆ. ಅದನ್ನು ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿನ ಹೊರವಲಯದ ನದಿಯಲ್ಲಿ ಸೇವೆಗೆ ತೊಡಗಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.
ಗತ ವೈಭವಕ್ಕೆ ಸೇರಿದ ಸಿಗಂದೂರು ಲಾಂಚ್‌ನ್ನು ಗಂಗೊಳ್ಳಿ- ಕೋಡಿ ಮಧ್ಯೆ ಸಂಪರ್ಕದ ನದಿಗೆ ಬಳಸಿಕೊಂಡಾಗ ಕುಂದಾಪುರದ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುವುದು ಇಲ್ಲಿನವರ ಆಶಯ
ಗಂಗೊಳ್ಳಿ-ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಗೆ ಅಡ್ಡಲಾಗಿ ನಡುವಿನ ಅಂತರ ಒಂದು ಕಿಲೋ ಮೀಟರ್. ದೋಣಿಯಲ್ಲಿ ಸಾಗಿದರೆ 20 ನಿಮಿಷ ಕ್ರಮಿಸಬೇಕಾಗುತ್ತದೆ. ಗಂಗೊಳ್ಳಿ ಮತ್ತು ಕೋಡಿಯಿಂದ ಪ್ರತಿದಿನ ಸಾವಿರಾರು ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾರೆ.
ಮೂರು ದಶಗಳ ಹಿಂದೆ ಕುಂದಾಪುರ- ಗಂಗೊಳ್ಳಿ ನಡುವಿನ ಸೇತುವೆ ಪ್ರಸ್ತಾವವಾಗುತ್ತಿದ್ದು ಸಂಬಂಧಿತರ ಇಚ್ಚಾಶಕ್ತಿಯ ಕೊರತೆಯಿಂದ ಇದೀಗ ನೆನೆಗುದಿಗೆ ಬಿದ್ದಿದೆ. ಬಸ್ ಮೂಲಕ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಕ್ರಮಿಸಬೇಕಾದರೆ 16 ಕಿ.ಮೀ. 45 ನಿಮಿಷ ಬೇಕಾಗುತ್ತದೆ. ಹೀಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಮ್ಮಾಡಿ ತಲ್ಲೂರಿನಿಂದ ಒಂದು ಸುತ್ತು ಹಾಕಿ ಕುಂದಾಪುರಕ್ಕೆ ಬರಬೇಕಾದರೆ ಒಂದು ಗಂಟೆಗಿಂತಲೂ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಪ್ರಸ್ತಾವಿತ ಸೇತುವೆ ನಿರ್ಮಾಣ ಆಗುವವರೆಗೆ ಸಿಗಂದೂರಿನ ಲಾಂಚ್ ಇಲ್ಲಿ ಸೇವೆಗೆ ತೊಡಗಿಸಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ.
ಲಾಂಚ್ ನಿಂದ ಏನೇನು ಅನುಕೂಲ?:
ಯಾವುದೇ ಗಂಭೀರ ಅವಗಢ ಸಂಭವಿಸಿದಾಗ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಕ್ಷಣಮಾತ್ರದಲ್ಲಿ ಬರಬಹುದು.
ಗಂಗೊಳ್ಳಿಯಿಂದ ತಾಜಾ ಮೀನು, ಇತರ ಸಾಮಾನುಗಳು ಅತೀ ಶೀಘ್ರದಲ್ಲಿ ಕುಂದಾಪುರ ಜನರಿಗೆ ತಲುಪಲು ಸಾಧ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಜನಕಾರಿ ಈಗಾಗಲೇ ಕುಂದಾಪುರದಲ್ಲಿ ರಿಂಗ್ ರೋಡ್ ಸಾಕಾರಗೊಂಡಿದೆ. ಲಾಂಚ್ ಬಂದರೆ ಇದರಿಂದ ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಕ್ಕೆ ಬಹಳಷ್ಟು ಅನುಕೂಲವಾಗಲಿದೆ.
ಉದ್ದಿಮೆದಾರರಿಗೆ ಸರಕು ಸಾಗಾಣಿಕೆಗೆ ಅನುಕೂಲ ಪಿಯುಸಿ ನಂತರ ಉನ್ನತ ವ್ಯಾಸಂಗಕ್ಕೆ ಕುಂದಾಪುರದ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ಅನುಕೂಲ. ಈ ಮಾರ್ಗದಲ್ಲಿ ಲಾಂಚ್ ಬಳಸಿಕೊಂಡರೆ ಹತ್ತು-ಹದಿನೈದು ನಿಮಿಷದಲ್ಲಿಯೇ ಕುಂದಾಪುರ ಸಂಪರ್ಕಿಸಲು ಸಾಧ್ಯ.
ಸಿಗಂದೂರಿನಲ್ಲಿ ಲಾಂಚ್ ನಿಲುಗಡೆಯಾಗಿ ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗದ ಅವಕಾಶ.
ಗತವೈಭವಕ್ಕೆ ಸೇರಿದ ಸಿಗಂದೂರು ಲಾಂಚನ್ನು ಕೋಡಿ- ಗಂಗೊಳ್ಳಿ ನದಿ ಮಧ್ಯ ಬಳಸಿಕೊಳ್ಳಲು ಕ್ಷೇತ್ರದ ಜನಪ್ರತಿನಿಧಿಗಳು ಜಡತ್ವ ಬಿಟ್ಟು ಮನಸ್ಸು ಮಾಡಿದರೆ ಕುಂದಾಪುರ ನಗರ ಇನ್ನಷ್ಟು ಅಭಿವೃದ್ಧಿ ಹೊಂದಿ, ಸುಂದರ ಕುಂದಾಪುರ ಸಾಕಾರಗೊಳ್ಳಬಹುದು.