
ಶಾಂತಿ ಸೌಹಾರ್ದ ಸಮಿತಿ ಸಭೆ-ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಇರಾದೆ ಸರ್ಕಾರಕ್ಕೆ ಇಲ್ಲ: ಗೃಹ ಸಚಿವರು
ಮಂಗಳೂರು: ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಕೆಲ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶಾಂತಿ ಸೌಹಾರ್ದ ಸಮಿತಿ ಸಭೆ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಇಂದು ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಧಾರ್ಮಿಕ ಉತ್ಸವಗಳನ್ನು ರಾತ್ರಿ 11.30ರ ಬಳಿಕ ಮುಂದುವರಿಸಬಾರದು ಎಂದು ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದ ಬಗ್ಗೆ ಚರ್ಚಿಸಲಾಗುವುದು. ಇದುವರೆಗೆ ಇಲ್ಲದ ಈ ಕ್ರಮ ಈಗ ಯಾಕೆ ಬಂದಿದೆ ಎಂಬ ಬಗ್ಗೆ ಆಲೋಚನೆ ಮಾಡಬೇಕು. ಯಾವುದೇ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇರಬಾರದು. ಮಾತ್ರವಲ್ಲ ಅದು ದ್ವೇಷಕ್ಕೆ ದಾರಿ ಮಾಡಿಕೊಡಬಾರದು. ಪೊಲೀಸರು ಕ್ರಮ ಕೈಗೊಳ್ಳಲು ಅವಕಾಶ ನೀಡದಂತೆ ಕಾರ್ಯಕ್ರಮಗಳನ್ನು ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಸಂಘಟಿಸಬೇಕು. ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಅಹಿತಕರ ಘಟನೆಗಳು ನಡೆದುಕೊಂಡು ಬರುತ್ತಿವೆ. ಇದು ದೇಶವ್ಯಾಪಿ ಪ್ರಚಾರಗೊಂಡು ದ.ಕ. ಜಿಲ್ಲೆಗೆ ಕಪ್ಪು ಚುಕ್ಕೆಯಾಗುವಂತೆ ಮಾಡಿದೆ. ಶಾಂತಿ ಕದಡುವುದನ್ನು ಶೇ.95 ಮಂದಿ ಬಯಸುವುದಿಲ್ಲ. ಉಳಿದ ಶೇ.5ರಷ್ಟು ಮಂದಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಇದು ಜಿಲ್ಲೆಯ ಸೌಹಾರ್ತೆಗೆ ಧಕ್ಕೆ ತರುತ್ತಿದೆ ಎಂದರು.
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಭವಿಷ್ಯದ ಮಂಗಳೂರಿನ ಯುವಜನತೆಗೆ ಸಮಾನತೆ, ಸೋದರತೆ, ಸೌಹಾರ್ದತೆ ಬೇಕಾಗಿದೆ. ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಒಗ್ಗಟ್ಟಿನ ಸಾಮರಸ್ಯವನ್ನು ಸಾರಬೇಕು. ಯಾವುದೇ ನೋವನ್ನು ಗುಣಪಡಿಸಲು ಆಯುಧವೇ ಔಷಧ ಆಗಬಾರದು. ಮಂಗಳೂರಿನ ಬಗ್ಗೆ ಹೊರಗೆ ಅಪನಂಬಿಕೆ ಬರುವುದು ಬೇಡ. ಸಮಾಜದಲ್ಲಿ ಸೌಹಾರ್ದತೆ ಮೂಡಿಸುವ ಕೆಲಸವನ್ನು ಕೇವಲ ಜನಪ್ರತಿನಿಧಿಗಳು, ಸರ್ಕಾರ ಮಾತ್ರವಲ್ಲ ಪ್ರತಿ ಮನೆಗಳು, ಸಂಘಸಂಸ್ಥೆ, ಹಿರಿಯರು ಮಾಡಬೇಕು ಎಂದರು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗ ಶಾಲೆ ಎನ್ನುತ್ತಾ ಹಿಂದೂ ಸಮಾಜವನ್ನು ದೂಷಿಸುವುದನ್ನು ಮೊದಲು ನಿಲ್ಲಿಸಬೇಕು. ಈ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ರಾಜಕಾರಣಕ್ಕೋಸ್ಕರ ಜಿಲ್ಲೆಯನ್ನು ಬಲಿಕೊಡಬಾರದು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಕಾರಣಕ್ಕಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಮೂಲ ಸರಿಯಾದಾಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯವಾಗಲಿದೆ. ಸರ್ಕಾರ ಈ ಕಾರ್ಯಕ್ಕೆ ಮುಂದಾಗಬೇಕು. ಜಿಲ್ಲೆಯ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಹಾಗೂ ಡ್ರಗ್ಸ್ ಮಾಫಿಯಾಗೆ ಕಡಿವಾಣ, ಗೋ ಹತ್ಯೆ, ಅಕ್ರಮ ಗೋ ಸಾಗಾಟ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಾದಾಗ ಜಿಲ್ಲೆ ಅಹಿತಕರ ಘಟನೆಗಳಿಂದ ಮುಕ್ತವಾಗಲಿದೆ. ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವುದನ್ನು ಸಹಿಸಲಾಗದು. ಗೋ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಕಡಿವಾಣ ಬೀಳುತ್ತಿಲ್ಲ. ಮಂಗಳೂರಿನಲ್ಲಿ ಗೋ ವಧಾಗೃಹಗಳನ್ನು ನಿಷೇಧಿಸಿದ್ದರೂ ವಧಾ ಕೇಂದ್ರಗಳು ಹೆಚ್ಚಾಗಿವೆ. ಇದರ ವಿರುದ್ಧ ಕ್ರಮ ಕೈಗೊಳ್ಳುವವರಾರು? ಇದಕ್ಕೆ ಕಡಿವಾಣ ಬೀಳದಿರುವುದರಿಂದಲೇ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ದರ್ಶನ್, ಜಿ.ಪಂ. ಸಿಇಒ ನರ್ವಡೆ ವಿನಾಯಕ್ ಕಾರ್ಬಾರಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ೩೯ ಮಂದಿ ಮಾತನಾಡಿದರು.