
ರಾಜಕರಣಿಯ ಸಂಬಂಧಿಕರಿಂದ ತೆಂಕಮಿಜಾರಿನಲ್ಲಿ ಹೈಟೆಕ್ ಗಣಿಗಾರಿಕೆ: ಜು.21ರಂದು ನಿಡ್ಡೋಡಿಯಲ್ಲಿ ಬೃಹತ್ ಪ್ರತಿಭಟನೆ
ಮೂಡುಬಿದಿರೆ: ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದ ರಾಜಕಾರಣಿಯೋರ್ವರ ಸಂಬಂಧಿಕರು ಸೇರಿಕೊಂಡು ತೆಂಕಮಿಜಾರು ಗ್ರಾಮಪಂಚಾಯತ್ ವ್ಯಾಪ್ತಿಯ ಬಡಗಮಿಜಾರು ಗ್ರಾಮದಲ್ಲಿ ನಡೆಸುತ್ತಿರುವ ಬಾಕ್ಸೈಟ್ ಗಣಿಗಾರಿಕೆಯಿಂದಾಗಿ ಪ್ರಾಕೃತಿಕ ವಿಕೋಪವಾಗುವ ಸಂಭವವಿರುವುದರಿಂದ ಈ ಬೃಹತ್ ಗಣಿಗಾರಿಕೆ ವಿರುದ್ಧ ಜು.21ನೇ ತಾರೀಕಿನಂದು ನಿಡ್ಡೋಡಿ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ನಿಡ್ಡೋಡಿ ಗ್ರಾಮಸ್ಥರ ಪರವಾಗಿ ಜಿ. ಪಂ. ಸದಸ್ಯ ಜನಾದ೯ನ ಗೌಡ ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹೈಟೆಕ್ ಗಣಿಗಾರಿಕೆಗೆ ತೆಂಕಮಿಜಾರು ಪಂಚಾಯತ್ ನಿಂದ ಯಾವುದೇ ಪರವಾನಿಗೆಯನ್ನು ಪಡೆದುಕೊಂಡಿಲ್ಲ,ಇದರಲ್ಲಿ ಪ್ರಮುಖವಾಗಿ ಕಂದಾಯ ಗಣಿ ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳು ಶಾಮೀಲಾಗಿರುವುದರಿಂದ ಯಾವೊಬ್ಬ ಅಧಿಕಾರಿ ಕೂಡಾ ಕ್ರಮತೆಗೆದುಕೊಳ್ಳುತ್ತಿಲ್ಲ ಇದರಿಂದಾಗಿ ಇಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ ‘ ಎಂದವರು ಆರೋಪಿಸಿದರು.
ಈ ಗಣಿಗಾರಿಕೆ ನಡೆಸುತ್ತಿರುವ ಭೂಮಿಯು ಹಿಂದೆ ನಿವೃತ್ತ ಸೈನಿಕರಿಗೆ ಮಂಜೂರಾತಿಯಾಗಿದ್ದು ,ಮಂಜೂರಾತಿ ಶರತ್ತುಗಳನ್ನು ಮೀರಿ ಗಣೊಗಾರಿಕೆಗೆ ಅನುಮತಿ ನೀಡಲಾಗಿದೆ, ಅಲ್ಲದೆ ಅದಿರು ಸಾಗಿಸುವ ಭೂಮಿಯು ಪರಿಶಿಷ್ಟ ಜಾತಿಯವರಿಗೆ ಸೇರಿದ್ದಾಗಿದ್ದು ಅವರ ಒಪ್ಪಿಗೆ ಪಡೆಯದೇ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿರುವ ಅವರು ಇದರಲ್ಲಿ ಇಲಾಖಾಧಿಕಾರಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಈಶ್ವರ್ ಕಟೀಲ್ ಅವರು ಮಾತನಾಡಿ‘ ಈ ಹೈಟೆಕ್ ಗಣಿಗಾರಿಕೆಯ ಹಿಂದೆ ರಾಜ್ಯದ ಪ್ರಭಾವಿ ರಾಜಕಾರಣಿಯೋರ್ವರಿದ್ದಾರೆ,ಅವರ ಸಂಬಂಧಿಕರೇ ಇದನ್ನು ನಡೆಸುತ್ತಿದ್ದಾರೆ,ಕೆಂಪುಕಲ್ಲು ಪಾಯಕ್ಕೊಂದು ಕಾನೂನು- ಇವರಿಗೊಂದು ಕಾನೂನಾ ?’ ಎಂದು ಪ್ರಶ್ನಿಸಿದರು.
ದಿನಕ್ಕೆ 60 ರಷ್ಟು ಘನವಾಹನಗಳು ಇಲ್ಲಿಂದ ಮೂಡುಬಿದಿರೆ ರಸ್ತೆಯಾಗಿ ಆಂದ್ರಪ್ರದೇಶಕ್ಕೆ ಹೋಗುತ್ತಿದೆ, ಪಾಪದವರ ಲಘುವಾಹನಗಳನ್ನು ತಡೆದು ನಿಲ್ಲಿಸಿ ಕೇಸ್ ಹಾಕುವ ಅಧಿಕಾರಿಗಳು ಈ ಘನವಾಹನಗಳನ್ನೇಕೆ ತಡೆಯುವುದಿಲ್ಲ? ಎಂದು ಪ್ರಶ್ನಿಸಿದರು.
ಕಾನೂನು ಪ್ರಕಾರವಾಗಿ ಏನು ಬೇಕಾದರೂ ಮಾಡಲಿ,ಯಾವುದೇ ಪರವಾನಿಗೆ ಇಲ್ಲದೆ ,ಸ್ಥಳೀಯ ಪಂಚಾಯತ್ ನ ಅನುಮತಿಯಿಲ್ಲದೆ ರಾಜಾರೋಷವಾಗಿ ಗಣಿಗಾರಿಕೆ ನಡೆಸುತ್ತಿರುವ ಈ ಗಣಿಗಾರಿಕೆ ನಿಲ್ಲಬೇಕು, ನಿಯಮ ರೂಪಿಸಿದವರೇ ನಿಯಮಗಳನ್ನು ಗಾಳಿಗೆ ತೂರಿದರೆ ಹೇಗೆ ? ಪಾಪದವರಿಗೊಂದು ನಿಯಮ,ಇವರಿಗೊಂದು ನಿಯಮ’ ನಾ ಎಂದವರು ಪ್ರಶ್ನಿಸಿದ್ದಾರೆ.
ನಿಡ್ಡೋಡಿ ಪರಿಸರದಲ್ಲಿ ಜನರ ಬದುಕಿಗೆ ಅನ್ಯಾಯ ಮಾಡಲು ಬಂದ ಕೆಲವು ಕಂಪೆನಿಗಳನ್ನು ಹಿಂದಕ್ಕೋಡಿಸಿದ್ದೇವೆ, ನಿಡ್ಡೋಡಿ, ಕಲ್ಲಮುಂಡ್ಕೂರು ,ತೆಂಕ- ಬಡಗಮಿಜಾರು ಗ್ರಾಮಸ್ಥರಿಗೆ ಈ ಕಂಪೆನಿಯನ್ನು ನಿಲ್ಲಿಸುವ ತಾಕತ್ತೂ ಇದೆ ಎಂದ ಅವರು ಜನಪರವಾಗಿ, ನೈಜವಾದ ಸಾಮಾಜಿಕ ಕಾಳಜಿಯಿಂದ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಸಾಮಾಜಿಕ ಹೋರಾಟಗಾರ,ಪಂಚಾಯತ್ ಮಾಜಿ ಸದಸ್ಯ ಸತೀಶ್ ಅಮೀನ್ ಕಲ್ಲಮುಂಡ್ಕೂರು, ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ ನಿಡ್ಡೋಡಿ, ತೆಂಕಮಿಜಾರು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ, ದಿವ್ಯೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.