ಬೆಳುವಾಯಿ ಗ್ರಾಮಸಭೆ: ಮೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿಣ೯ಯಿಸಿದ ಪಂಚಾಯತ್

ಬೆಳುವಾಯಿ ಗ್ರಾಮಸಭೆ: ಮೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿಣ೯ಯಿಸಿದ ಪಂಚಾಯತ್


ಮೂಡುಬಿದಿರೆ:  ಚಂದ್ರಶೇಖರ್ ಎಂಬವರು ಅನಧಿಕೃತ ಕಟ್ಟಡವೊಂದಕ್ಕೆ ಹರೀಶ್ ಸುವರ್ಣ ಎಂಬವರ ಮನೆ ನಂಬರ್ ಮತ್ತು ದಾಖಲೆಗಳನ್ನು ಬಳಸಿಕೊಂಡು   ಮೆಸ್ಕಾಂನ ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದನ್ನು ವಿರೋಧಿಸಿದ ಪಂಚಾಯತ್ ವಿದ್ಯುತ್ ಸಂಪರ್ಕ  ವಾರದೊಳಗೆ ಕಡಿತಗೊಳಿಸದಿದ್ದರೆ ಮೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಸೋಮವಾರ ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು.
 

ಪಂಚಾಯತ್ ಅಧ್ಯಕ್ಷ ಸುರೇಶ್ ಕೆ.ಗೋಲಾರ ವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಪಿಡಿಒ ಭೀಮ ನಾಯಕ್, ಪಂಚಾಯತ್ ಮುಂಭಾಗದಲ್ಲಿರುವ ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪಕ೯ ಕಲ್ಪಿಸಿರುವ ಬಗ್ಗೆ  ಮೆಸ್ಕಾಂನ ಅಕ್ಷರ್ ಪಾಟೀಲ್ ಅವರಲ್ಲಿ ಪ್ರಶ್ನಿಸಿದಾಗ, ಒಂದು ವಾರದೊಳಗೆ ವೇಳೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುವುದೆಂದು ಸಭೆಯಲ್ಲಿ ನಿಧ೯ರಿಸಲಾಯಿತು.


ಬೆಳುವಾಯಿಯ ಕಾನ ಪ್ರದೇಶದಲ್ಲಿ ನಡೆಸಲಾದ ಅಭಿವೃದ್ಧಿ ಕಾಮಗಾರಿಯಲ್ಲಿ ಗುತ್ತಿಗೆದಾರರ ಬಿಲ್ಲನ್ನು ತಡೆ ಹಿಡಿದಿರುವುದರ ಕುರಿತು ಸದಸ್ಯ ಭರತ್ ಶೆಟ್ಟಿ ಹಾಗೂ ಅಧ್ಯಕ್ಷರನ್ನು ಪ್ರಶ್ನಿಸಿದಾಗ  ಸದಸ್ಯೆ ಶುಭ ಸುರೇಶ್, ಸೂರಜ್ ಶೆಟ್ಟಿ, ಸೋಮನಾಥ್ ಕೋಟ್ಯಾನ್ ಮಧ್ಯೆ ಮಾತಿನ ಚಕಮಕಿ ಉಂಟಾಯಿತು. 
ಮುಡಾಯಿಕಾಡು ಕಾಡುಮನೆ ಪ್ರದೇಶದಲ್ಲಿ ತೀರ ಬೇಡಿಕೆ ಇರುವ ರಸ್ತೆಗೆ ಎರಡು ವರ್ಷಗಳ ಹಿಂದೆ ಜಲ್ಲಿ ತಂದು ಹಾಕಿದರೂ, ಕಾಮಗಾರಿ ನಡೆದಿಲ್ಲ. ಇದರಿಂದ ಈ ಪ್ರದೇಶದಲ್ಲಿ ವಾಹನ ಓಡಾಟ ಅಸಾಧ್ಯವಾಗಿದೆ ಎಂದು ಗ್ರಾಮಸ್ಥ ಮಂಜುನಾಥ್ ಹೇಳಿದರು. ಅಕ್ಟೋಬರ್ ತಿಂಗಳೊಳಗಡೆ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗುವುದೆಂದು ಪಿಡಿಒ ತಿಳಿಸಿದರು.
ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಹಲವೆಡೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಗ್ರಾಮಸ್ಥರು, ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳಾಗಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ, ಪರಿಹರಿಸಲಾಗುವುದು ಎಂದು ಡಿಬಿಎಲ್ ಕಂಪೆನಿಯ ಅಧಿಕಾರಿ ಬಾಲಾಜಿ ಭರವಸೆ ನೀಡಿದರು.
ಗ್ರಾಮಸಭೆಗೆ ಗ್ರಾಮಕರಣಿಕರು ಗೈರಾಗಿದ್ದು, ಸಭೆಗಳಿಗೆ ಕಡ್ಡಾಯವಾಗಿ ಗ್ರಾಮಕರಣಿಕರು ಅಥವಾ ಕಂದಾಯ ಇಲಾಖೆಯ ಪ್ರತಿನಿಧಿಗಳು ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. 
ಉಪಾಧ್ಯಕ್ಷೆ ಜಯಂತಿ, ಗ್ರಾಮ ಸಭೆ ನೋಡಲ್ ಅಧಿಕಾರಿ ಕೆ.ಪ್ರವೀಣ್, ಲೆಕ್ಕ ಸಹಾಯಕ ರಮೇಶ್ ಬಂಗೇರ, ಸದಸ್ಯರುಗಳು, ಇಲಾಖಾ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article