
ಮೂಡುಬಿದಿರೆ: ಪಣಪಿಲ ಶ್ರೀರಾಜ್ ಮತ್ಸ್ಯ ಫಾರ್ಮ್ ನಲ್ಲಿ "ಮತ್ಸ್ಯ ಮೇಳ" ಆರಂಭ
ಮೂಡುಬಿದಿರೆ: ದಕ ಜಿಲ್ಲಾ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇವರ ಸಹಭಾಗಿತ್ವದಲ್ಲಿ ಧರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಗ್ರಾಮದ ಕೊಟ್ಟಾರಿಬೆಟ್ಟುವಿನ ಶ್ರೀ ರಾಜ್ ಮತ್ಸ್ಯ ಫಾರ್ಮ್ ನಲ್ಲಿ ಎರಡು ದಿನ ನಡೆಯುವ "ಮತ್ಸ್ಯ ಮೇಳ"ವು ಶನಿವಾರ ಆರಂಭಗೊಂಡಿತು.
ಮೀನು ಕೃಷಿಕರ ದಿನಾಚರಣೆಯ ಅಂಗವಾಗಿ ನಡೆಯುವ ಈ ಮೇಳಕ್ಕೆ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ದಿಲೀಪ್ ಕುಮಾರ್ ಅವರು ಚಾಲನೆ ನೀಡಿ ಮಾತನಾಡಿ ರೈತರಿಗೆ ಆದಾಯ ತರುವ ಉದ್ದಿಮೆ ಮೀನು ಕೃಷಿಯಾಗಿದೆ. ಈ ಉದ್ದಿಮೆಗೆ ಸಬ್ಸಿಡಿ ದೊರೆಯುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ದರೆಗುಡ್ಡೆ ಗ್ರಾಮ ಪಂಚಾಯತ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಶ್ರೀರಾಜ್ ಫಾರ್ಮ್ಸ್ ನಲ್ಲಿ ಅಚ್ಚುಕಟ್ಟಾದ ಮೀನು ಕೃಷಿ ನಡೆಯುತ್ತಿದೆ. ಈ ಪ್ರಕ್ರಿಯೆ ಇತರರಿಗೂ ಪ್ರೇರಣೆ ಆಗಿದ್ದು, ಇಲಾಖೆ ಸೌಲಭ್ಯಗಳನ್ನು ಬಳಸಿ ಮೀನು ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆಯಿತ್ತರು.
ಮೀನುಗಾರಿಕಾ ಮಹಾವಿದ್ಯಾಲಯದ ಉಪಪ್ರಾಧ್ಯಾಪಕ ಶಿವಕುಮಾರ್ ಮಗದ ಹಾಗೂ ಜಲ ಕೃಷಿ ತಜ್ಞ ಹೊನ್ನಾನಂದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮೀನು ಕೃಷಿ ಬಗ್ಗೆ ಮಾಹಿತಿ ನೀಡಿದರು.
ದರೆಗುಡ್ಡೆ ಗ್ರಾಮ ಪಂಚಾಯತ ಸದಸ್ಯರಾದ ಮುನಿರಾಜ ಹೆಗ್ಡೆ, ತುಳಸಿ ಮೂಲ್ಯ, ಉದ್ಯಮಿ ಹೇಮಾ ಕೆಕೆ ಪೂಜಾರಿ, ಕೃಷಿಕರಾದ ಹರಿಯಪ್ಪ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಅಳಿಯೂರು ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ವೈ ಎನ್ ನಿಂಗನಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಮೀಳಾ ಪ್ರಸನ್ನ ಕೋಟ್ಯಾನ್ ಪ್ರಾರ್ಥನೆಗೈದರು. ರಾಜೇಶ್ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು. ಪ್ರಭ ರಾಜೇಂದ್ರ ಕೋಟ್ಯಾನ್ ಧನ್ಯವಾದವಿತ್ತರು.
ಈ ಮೇಳದಲ್ಲಿ ಮೀನು ಕೃಷಿ ತರಬೇತಿ, ಮೀನು ಹಿಡಿಯುವುದು ಮತ್ತು ಮಾರಾಟದ ಮೇಳದ ಬಗ್ಗೆ ಮಾಹಿತಿಯೂ ಸಿಗಲಿದೆ.