ಸುರತ್ಕಲ್-ಬಿ.ಸಿ. ರೋಡ್ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರಿಸುವಂತೆ ಕ್ಯಾ. ಚೌಟ ಮನವಿ

ಸುರತ್ಕಲ್-ಬಿ.ಸಿ. ರೋಡ್ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರಿಸುವಂತೆ ಕ್ಯಾ. ಚೌಟ ಮನವಿ

ನವದೆಹಲಿ: ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ಬಿ.ಸಿ. ರೋಡ್ ನಡುವಿನ ಹೆದ್ದಾರಿಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ತಂದು ಅದರ ಸಮರ್ಪಕ ನಿರ್ವಹಣೆ, ವಾಹನಗಳ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿಯಾದ ಸಂಸದರು, ಮಂಗಳೂರಿನ ಬಂದರು ಸಂಪರ್ಕ ಹೆದ್ದಾರಿ ತೀರಾ ಹದಗೆಟ್ಟಿದ್ದು, ಈ ರಸ್ತೆಯು ಪ್ರಸ್ತುತ ವಿಶೇಷ ಉದ್ದೇಶದ ಘಟಕವಾಗಿ ರಚಿಸಲಾದ ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್ ವ್ಯಾಪ್ತಿಗೆ ಬರುತ್ತದೆ. ಈ ರಸ್ತೆ ನಿರ್ವಹಣೆಗೆ ನಿರ್ದಿಷ್ಟ ಏಜೆನ್ಸಿ ಇಲ್ಲದಿರುವುದು, ನಿಧಿಯ ಕೊರತೆ ಹಾಗೂ ಕಾಲ ಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದು ಈ ಮಾರ್ಗದ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಮಳೆಗಾಲದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ವಾಹನ ಸಂಚಾರ ದುಸ್ತರವಾಗುತ್ತದೆ ಎಂದು ಅವರು ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಈ ಗಂಭೀರ ಸಮಸ್ಯೆ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸುರತ್ಕಲ್ -ಬಿ.ಸಿ. ರೋಡ್ ಹೆದ್ದಾರಿಯನ್ನು ಎನ್ ಹೆಚ್‌ಎಐ ವ್ಯಾಪ್ತಿಗೆ ತಂದು ನವೀಕರಣ ಮತ್ತು ನಿಯಮಿತ ನಿರ್ವಹಣೆಗೆ ಶಾಶ್ವತ ಪರಿಹಾರಕ್ಕಾಗಿ ಈ ಸಮಸ್ಯೆ ಬಗೆಹರಿಸಲು ಸಚಿವರ ಹಸ್ತಕ್ಷೇಪ ಕೋರಿದ್ದಾರೆ. 

ಬಹು ನಿರೀಕ್ಷಿತ ಮಂಗಳೂರು-ಬೆಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆ ಹೆದ್ದಾರಿ ಸಚಿವಾಲಯದಿಂದ ಟೆಂಡರ್ ನಡೆಸಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದು ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ವಿಶೇಷ  ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಗಳೂರಿಗೆ ಹೊರ ವರ್ತುಲ ರಸ್ತೆ:

ಕರ್ನಾಟಕದಲ್ಲಿ 2ನೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ಕೆಲವೆಡೆ ವಾಹನ ದಟ್ಟನೆ ಸಮಸ್ಯೆ ಎದುರಾಗುತ್ತಿದೆ. ಇನ್ನೊಂದೆಡೆ, ಕರಾವಳಿ ತೀರವನ್ನು ಹೊಂದಿರುವ ಕಾರಣ ನಗರೀಕರಣದ ವ್ಯಾಪ್ತಿ ವಿಸ್ತರಣೆಗೂ ನಾನಾ ರೀತಿಯ ಸವಾಲು ಎದುರಾಗುತ್ತಿವೆ. ರಸ್ತೆ, ರೈಲು, ಬಂದರು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆಯಿಂದ ಈ ನಗರಕ್ಕೆ ಹೆಚ್ಚಿನ ಸಂಖ್ಯೆಯ ಜನರು-ಪ್ರವಾಸಿಗರ ಭೇಟಿಗೂ ಅನುಕೂಲ ಕಲ್ಪಿಸಿದೆ. ಆದರೆ, ನಗರೀಕರಣದ ದೃಷ್ಟಿಯಿಂದ ಮಂಗಳೂರು ಹೃದಯಭಾಗದ ಜನದಟ್ಟನೆ ಹಾಗೂ ಟ್ರಾಫಿಕ್ ಸಮಸ್ಯೆಗೆ ದೂರದೃಷ್ಟಿಯ ಪರಿಹಾರ ಕಂಡುಕೊಳ್ಳುವುದಕ್ಕೆ NH-66 ಮತ್ತು NH-75 ಹೆದ್ದಾರಿಗಳನ್ನು ಸಂಪರ್ಕಿಸುವ ಮಂಗಳೂರಿಗೆ ಹೊರ ವರ್ತುಲ ರಸ್ತೆ(ರಿಂಗ್ ರೋಡ್ )ಯನ್ನು ನಿರ್ಮಿಸುವಂತೆ ಸಂಸದರು ಮನವಿ ಮಾಡಿದ್ದಾರೆ.

ಶಿರಾಡಿ ಘಾಟಿ ವಿಭಾಗದ ಜಂಟಿ ಸಮೀಕ್ಷೆ:

ಶಿರಾಡಿ ಘಾಟಿ ಭಾಗದಲ್ಲಿ ರಸ್ತೆ ಹಾಗೂ ರೈಲು ಹಳಿಗಳ ಅಭಿವೃದ್ಧಿ ಕಾಮಗಾರಿಗೆ ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿ ಸಮೀಕ್ಷೆಯನ್ನು ಕೈಗೊಳ್ಳಲು ಮತ್ತು ಅದಕ್ಕೆ ಸಂಬಂಧಿಸಿದ ಆPಖ ಅನ್ನು ಮೇಲ್ವಿಚಾರಣೆ ಮಾಡಲು ತಜ್ಞರ ಸಮಿತಿಯನ್ನು ನೇಮಿಸುವಂತೆ ರೈಲ್ವೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುವಂತೆಯೂ ಮನವಿ ಮಾಡಿದರು. 

ಶಿರಾಡಿ ಘಾಟಿ ಪ್ರದೇಶವು ಪರಿಸರ ಸೂಕ್ಷ್ಮತೆ ಮತ್ತು ತಾಂತ್ರಿಕ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಸಚಿವಾಲಯದೊಂದಿಗೆ ತಜ್ಞರ ನೇತೃತ್ವದ ಜಂಟಿ ವಿಧಾನವು ಸೂಕ್ತ ಜೋಡಣೆ, ಸುಸ್ಥಿರತೆ ಮತ್ತು ದೀರ್ಘಕಾಲೀನ ಪರಿಹಾರ-ಮಾರ್ಗೋಪಾಯಗಳನ್ನು ಒದಗಿಸುತ್ತದೆ ಎಂದು ಸಂಸದರು ಸಚಿವರಿಗೆ ಮನದಟ್ಟು ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ, ಮೂಲಸೌಕರ್ಯ, ಮಂಗಳೂರಿನಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ, ಶಿರಾಡಿ ಘಾಟಿ ಡಿಪಿಆರ್‌ಗೆ ಜಂಟಿ ಸಮೀಕ್ಷೆ ನಡೆಸುವುದು ಸೇರಿದಂತೆ ಎಲ್ಲ ಮನವಿಗಳಿಗೂ ಸಚಿವ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಭೇಟಿ ಬಳಿಕ ಕ್ಯಾ. ಚೌಟ ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article