
ಹಣದ ಆಮಿಷ ನೀಡಿಲ್ಲ: ಮುರಳೀಕೃಷ್ಣ ಹಸಂತಡ್ಕ ಸ್ಪಷ್ಟನೆ
ಪುತ್ತೂರು: ಹೆಣ್ಣುಮಗಳಿಗೆ ಅನ್ಯಾಯವಾದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ರೂ.10 ಲಕ್ಷ ಆಮಿಷ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಮುರಳೀಕೃಷ್ಣ ಹಸಂತಡ್ಕ ನಾನು ಯಾವುದೇ ಹಣದ ಆಮಿಷ ನೀಡಿಲ್ಲ. ಆದರೆ ಯುವಕನ ಕುಟುಂಬ ಹೇಳಿರುವುದನ್ನು ಸಂತ್ರಸ್ತೆಯ ಕುಟುಂಬಕ್ಕೆ ಹೇಳಿರುವುದು ನಿಜ ಎಂದಿದ್ದಾರೆ.
ಜೂ.ರಂದು ಈ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಇದರಲ್ಲಿ ಮೂರು ಜೀವ ಹಾಗೂ ಎರಡು ಕುಟುಂಬದ ಪ್ರಶ್ನೆ ಇದೆ. ಹಾಗಾಗಿ ಗಡಿಬಿಡಿ ಮಾಡಬೇಡಿ ಎಂದಿದ್ದೆ. ಪಿಜಿ ಜಗನ್ನೀವಾಸ ರಾವ್ ಅವರಲ್ಲಿ ಈ ಬಗ್ಗೆ ಮಾತನಾಡಿದಾಗ ಹುಡುಗ ಒಪ್ಪುತ್ತಿಲ್ಲ ಎಂದಿದ್ದರು. ಹಿಂದೂ ಹೆಣ್ಣುಮಗಳಿಗೆ ಅನ್ಯಾಯವಾಗಬಾರದು ಎಂದು ಹೇಳಿದಾಗ ಜೂ.23 ಬಳಿಕ ರಿಜಿಸ್ಟರ್ ಮ್ಯಾರೇಜ್ ಮಾಡುವುದಾಗಿ ಒಪ್ಪಿದ್ದಾರೆ. ಜೂ.24ರ ರಾತ್ರಿ ತನಕ ಯಾವುದೇ ವಿಚಾರದಲ್ಲಿಯೂ ಸ್ಪಷ್ಟತೆ ನೀಡಿಲ್ಲ. ಈ ಕಾರಣದಿಂದ ಕಾನೂನು ಹೋರಾಟ ಮುಂದುವರಿಸಿ ನಿಮ್ಮ ಜತೆಗೆ ನಾವಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ.
ದುಡ್ಡು ಕೊಟ್ಟಾದರೂ ಮುಗಿಸಿ..
ಒಂದು ಬಾರಿ ಯುವತಿ ಮತ್ತು ಯುವಕನನ್ನು ಮುಖಾಮುಖಿಯಾಗಿ ಮಾತನಾಡಿಸಲಾಗಿತ್ತು. ಈ ವೇಳೆ ವಿವಾಹ ಆಗುವುದಿಲ್ಲ ಎಂಬ ವಿಚಾರ ಚರ್ಚೆಯಾಗಿತ್ತು. ಮಗ ಮದುವೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ದುಡ್ಡು ಕೊಟ್ಟಾದರೂ ಪ್ರಕರಣವನ್ನು ಮುಗಿಸಿ ಎಂದು ಯುವಕನ ಅಪ್ಪ ತಿಳಿಸಿದ್ದರು. ಆದರೆ ಗರ್ಭಪಾತದ ವಿಚಾರ ಚರ್ಚೆಯಾಗಿರಲಿಲ್ಲ. ಈ ಪ್ರಕರಣದಲ್ಲಿ ಎರಡು ಮನಸ್ಸುಗಳು ಹಾಗೂ ಎರಡು ಕುಟುಂಬಗಳನ್ನು ಒಟ್ಟು ಸೇರಿಸುವ ಕೆಲಸ ನಡೆಯಬೇಕಾಗಿದೆ ಎಂದವರು ಹೇಳಿದರು.