ಸಲಹೆಗಾಗಿ ನನ್ನ ಮೇಲೆ ‘ಗೂಬೆ’-‘ಪುತ್ತಿಲ’ ಪ್ರಕರಣದಲ್ಲೂ ರಾಜಕೀಯ ಮಾಡಿಲ್ಲ: ಅಶೋಕ್ ರೈ

ಸಲಹೆಗಾಗಿ ನನ್ನ ಮೇಲೆ ‘ಗೂಬೆ’-‘ಪುತ್ತಿಲ’ ಪ್ರಕರಣದಲ್ಲೂ ರಾಜಕೀಯ ಮಾಡಿಲ್ಲ: ಅಶೋಕ್ ರೈ


ಪುತ್ತೂರು: ಪುತ್ತೂರಿನಲ್ಲಿ ನಡೆದಿರುವ ಘಟನೆ ಎರಡು ಕುಟುಂಬಗಳ ವಿಚಾರವಾಗಿದೆ. ಅದು ಒಳ್ಳೆಯ ರೀತಿಯಲ್ಲಿಯೇ ಮುಗಿಯಲಿ ಎಂದುಕೊಂಡು ಸಲಹೆ ನೀಡಿದ್ದೆ. ಆದರೆ ಅದಕ್ಕೆ ಕೆಲ ಪಕ್ಷಗಳು-ಸಂಘಟನೆಗಳು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ. ಇಂತಹ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಹಾಗೇ ನೋಡಿದರೆ ಬಿಜೆಪಿ ಅವರನ್ನು ಉಚ್ಛಾಟನೆ ಮಾಡಿದೆಯಾ.. ಮಾಡಬೇಕು ಎನ್ನುವುದು ನನ್ನ ಉದ್ದೇಶ ಅಲ್ಲ. ಆದರೆ ವಿನಾ ಕಾರಣ ಅದನ್ನು ಬೇರೆಯವರ ಮೇಲೆ ಹೊರಿಸುವುದು ತಪ್ಪು ಎಂದು ಶಾಸಕ ಅಶೋಕ್ ರೈ ಹೇಳಿದರು.

ಶನಿವಾರ ಪುತ್ತೂರಿನ ಸಿದ್ಯಾಳದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ ಬಳಿಕ ಅವರು ಮಾದ್ಯಮದೊಂದಿಗೆ ಮಾತನಾಡಿದರು.

ಫೋನ್ ಕರೆಯಲ್ಲಿಯೇ ಸಲಹೆ:

ಠಾಣೆಯಲ್ಲಿದ್ದಾಗ ಎರಡೂ ಕುಟುಂಬಗಳು ನನ್ನಲ್ಲಿ ಮಾತನಾಡಿರುವುದು. ನಾನು ಫೋನ್ ನಲ್ಲಿಯೇ ಅವರಿಗೆ ಸಲಹೆ ನೀಡಿರುವುದು ಹೊರತು ರಾಜೀಸಂಧಾನ ಮಾಡಿದ್ದಲ್ಲ. ಇಬ್ಬರೂ ಮದುವೆಯಾಗುತ್ತಾರೆ ಎಂದಾಗ ದೂರು ಕೊಟ್ಟು ಅವರು ಪ್ರತ್ಯೇಕವಾಗುವುದು ಬೇಡ ಎಂಬ ನೆಲೆಯಲ್ಲಿ ಸಲಹೆ ನೀಡಿದ್ದೆ. ಆದರೆ ಈಗ ಕೆಲ ಸಂಘಟನೆಗಳು ಪಕ್ಷಗಳು ನಾನು ರಾಜೀಸಂಧಾನ ಮಾಡಿದ್ದು, ಅವರೇ ಅದನ್ನು ಮುಗಿಸಬೇಕು ಎಂಬಂತೆ ಮಾತನಾಡುತ್ತಿದ್ದಾರೆ. ಈ ಕ್ಷಣಕ್ಕೂ ನಾನು ಎರಡೂ ಕುಟುಂಬಗಳಿಗೆ ಒಮ್ಮತದಿಂದ ಇದನ್ನು ಮುಗಿಸಿಕೊಳ್ಳಿ. ಇಬ್ಬರಿಗೂ ಮದುವೆ ಮಾಡಿ ಎಂದೇ ಹೇಳುತ್ತಿದ್ದೇನೆ ಎಂದರು.

ಪುತ್ತಿಲ ಪ್ರಕರಣದಲ್ಲೂ ರಾಜಕೀಯ ಮಾಡಿಲ್ಲ..:

ಅರುಣ್ ಕುಮಾರ್ ಪುತ್ತಿಲ ನೀಡಿದ ಹೇಳಿಕೆ ನನಗೆ ನೋವುಂಟು ಮಾಡಿದೆ. ಯಾರದೇ ವೈಯುಕ್ತಿಕ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಪುತ್ತಿಲ ಅವರ ವ್ಯಕ್ತಿಗತ ಪ್ರಕರಣ ನಡೆದಾಗಲೂ ನಾನು ಮಾತನಾಡಿಲ್ಲ. ಆಗ ನನಗೆ ರಾಜಕೀಯ ಮಾಡುವುದಿದ್ದರೆ ಆ ಪ್ರಕರಣವನ್ನು ಎಲ್ಲಿಗೋ ಒಯ್ಯಬಹುದಿತ್ತು. ಆದರೂ ರಾಜಕೀಯವಾಗಿ ಅದನ್ನು ಬಳಸಿಕೊಂಡಿಲ್ಲ. ಆದರೆ ಈ ಘಟನೆಯಲ್ಲಿ ನನ್ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅವರು ಹೇಳಿದರು. 

ರಾಜಕೀಯ ಮಾಡೋದು ಬೇಡ:

ಎರಡು ಕುಟುಂಬಗಳ ಪ್ರಶ್ನೆ ಇದಾಗಿದೆ. ಇದನ್ನು ಯಾರೂ ಕೂಡಾ ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವುದು ಬೇಡ. ಪರಸ್ಪರ ಒಪ್ಪಿದ್ರೆ ಮಾತ್ರ ಮದುವೆ ಮಾಡಲು ಸಾಧ್ಯ. ಒಂದು ವೇಳೆ ಬಲಾತ್ಕಾರವಾಗಿ ಒಪ್ಪಿಸಿ ಮದುವೆ ಮಾಡಿದರೆ ಅವರ ಬದುಕು ಚೆನ್ನಾಗಿರುತ್ತದಾ.. ಈಗ ನಾವಿದ್ದೇವೆ. ಸುಪ್ರೀಂ ಕೋರ್ಟು ತನಕ ಹೋಗುತ್ತವೆ ಎಂದು ಬೊಬ್ಬಿಡುವವರು ಇನ್ನೊಂದು ತಿಂಗಳಾದರೆ ಕಾಣಲೂ ಸಿಗುವುದಿಲ್ಲ. ಅವರ ಜೀವನ ಪರ್ಯಂತ ಅವರ ಜತೆಗೆ ನಾವು ಇರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. 

ಶುಕ್ರವಾರ ಸಂಜೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮಗಳು ನಡೆಯಲಿವೆ. ಒಂದು ವೇಳೆ ಬೇರೆ ಪಕ್ಷದವರು ನನ್ನ ಸ್ಥಾನದಲ್ಲಿರುತ್ತಿದ್ದರೆ ಖಂಡಿತಾ ರಾಜಕೀಯ ಮಾಡುತ್ತಿದ್ದರು. ನಾನು ಯಾವತ್ತಿಗೂ ಈ ಹೆಣ್ಣು ಮಗಳ ಪರವಾಗಿಯೇ ನಿಲ್ಲುತ್ತೇನೆ. ಈಗ ಈ ಘಟನೆಯಲ್ಲಿ ತಮ್ಮ ‘ಅಡ್ವಟೈಸ್‌ಮೆಂಟ್’ ತೆಗೆದುಕೊಳ್ಳುವವರು ತುಂಬಾ ಜನ-ಸಂಘಟನೆಗಳು ಇವೆ. ಆದರೆ ಅವರ‍್ಯಾರೂ ಮುಂದೆ ನಿಮ್ಮ ಜತೆಗೆ ಬರುವುದಿಲ್ಲ. ಒಳ್ಳೆಯ ನಿರ್ಧಾರದಿಂದ ಎರಡೂ ಕುಟುಂಬಗಳಿಗೂ ಒಳ್ಳೆಯದಾಗಲಿ ಎಂಬುವುದೇ ನನ್ನ ಆಶಯ ಎಂದು ಅಶೋಕ್ ರೈ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article