
ಚಿನ್ನದಂಗಡಿಗಳಲ್ಲಿ ಚಿನ್ನ ಖರೀದಿಸಿ ಹಣ ನೀಡದೆ ಮಹಿಳೆಯಿಂದ ವಂಚನೆ
ಶಿರ್ವ: ಮಹಿಳೆಯೊಬ್ಬಳು ಶಿರ್ವ ಪೇಟೆಯಲ್ಲಿರುವ ಮೂರು ಪ್ರತ್ಯೇಕ ಚಿನ್ನಾಭರಣಗಳ ಮಳಿಗೆಗಳಿಂದ ಕೇವಲ ಫೋನ್ ಕರೆಯ ಮೂಲಕ 90 ಗ್ರಾಮ್‌ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಖರೀದಿಸಿ ಹಣ ನೀಡದೆ ವಂಚಿಸಿರುವ ಘಟನೆ ವರದಿಯಾಗಿದೆ.
ಫರೀದಾ ಚಿನ್ನಾಭರಣ ಪಡೆದು ಹಣ ನೀಡದೆ ವಂಚಿಸಿರುವ ಆರೋಪಿ.
ಆರೋಪಿಯು ಕಳೆದ ಮಾರ್ಚ್ ತಿಂಗಳಲ್ಲಿ ಶಿರ್ವ ಪೇಟೆಯಲ್ಲಿರುವ ನ್ಯೂ ಭಾರ್ಗವಿ ಜುವೆಲ್ಲರ್ಸ್‌ನ ಮಾಲಕ ಗಣೇಶ್ ಅವರಿಗೆ ಫೋನ್ ಕರೆ ಮಾಡಿ ನಂಬಿಸಿ ಇತರ ಆರೋಪಿಗಳಾದ ಅಪ್ಸಲ್ ಮತ್ತು ಇತರ ಇಬ್ಬರು ಸಂಬಂಧಿಕರ ಮುಖಾಂತರ 1.78 ಲಕ್ಷ ರೂ. ಮೌಲ್ಯದ 69.165 ಗ್ರಾಂ. ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿ ಬಳಿಕ ಹಣ ನೀಡುವುದಾಗಿ ನಂಬಿಸಿ ಪಡೆದುಕೊಂಡಿದ್ದು, ಈ ವರೆಗೂ ಹಣ ಪಾವತಿಸದೆ ಮೋಸ ಮಾಡಿದ್ದಾಳೆ.
ಇದೇ ಮಹಿಳೆ ಶಿರ್ವದ ಕೃಪಾ ಜುವೆಲ್ಲರ್ಸ್‌ನ ಅನುಷ್ ಅವರಿಗೂ ಫೋನ್ ಕರೆ ಮಾಡಿ 10.740 ಗ್ರಾಂ. ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಹಾಗೂ ಶಿರ್ವದ ಪುಷ್ಪಾ ಜುವೆಲ್ಲರ್ಸ್‌ನ ಶ್ರೀಹರ್ಷ ಅವರಿಂದ 18.660 ಗ್ರಾಂ. ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಆರೋಪಿ ಅಪ್ಸಲ್ ಮುಖಾಂತರ ಮಂಗಳೂರಿಗೆ ತರಿಸಿಕೊಂಡು ಪಡೆದುಕೊಂಡು ಬಿಲ್ಲು ಪಾವತಿದೆ ವಂಚಿಸಿದ್ದಾಳೆ.
ಈ ಬಗ್ಗೆ ನ್ಯೂ ಭಾರ್ಗವಿ ಜುವೆಲ್ಲರ್ಸ್‌ನ ಮಾಲಕ ಗಣೇಶ್ ಶಿರ್ವ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.