
ಕುಕ್ಕೆಸುಬ್ರಹ್ಮಣ್ಯದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ
Tuesday, July 29, 2025
ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಮಂಗಳವಾರ ಪೂರ್ವಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು.
ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇ.ಮೂ. ರಮೇಶ್ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಮಹಾಮಂಗಳಾರತಿ ನೆರವೇರಿಸಿದರು.ಅಲ್ಲದೆ ವಿವಿಧ ವೈದಿಕ ವಿದಿವಿಧಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು.
ಈ ಮೊದಲು ಪ್ರಾತಃಕಾಲ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿಶೇಷ ಪಂಚಾಮೃತ ಮಹಾಭಿಷೇಕ ಮತ್ತು ಪ್ರಸನ್ನ ಪೂಜೆ ನೆರವೇರಿಸಿದರು.
ಭಕ್ತರಿಂದ ತನು ಸಮರ್ಪಣೆ:
ಪ್ರಧಾನ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಭಕ್ತರು ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ಪುರೋಹಿತ ಕುಮಾರ ಭಟ್ ಎರೆದರು. ತನುವಿನೊಂದಿಗೆ ಹಿಂಗಾರ, ಹಣ್ಣುಕಾಯಿ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ಸಾಗಿ ಬಂದು ಭಕ್ತರು ಹಾಲು ಮತ್ತು ಎಳನೀರು ಸಮರ್ಪಿಸಿದರು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಜುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯಕುಮಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್. ಮತ್ತಿತರರು ಉಪಸ್ಥಿತರಿದ್ದರು.