
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ
Friday, July 4, 2025
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತೀ ವೀ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ನೂತನ ಸಿರಿ ಮಿಲ್ಲೆಟ್ ಕೆಫೆ’ಯು ಜು.4 ರಂದು ಶುಭಾರಂಭಗೊಂಡಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಸಿರಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವಿನೂತನವಾದ ಸಿರಿ ಮಿಲ್ಲೆಟ್ ಕೆಫೆಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾರವಾಡ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ದಂಪತಿಗಳು ದೀಪ ಬೆಳಗಿಸಿ ಶುಭ ಹಾರೈಸಿದರು.
ಧಾರವಾಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ್ ಕುಮಾರ್, ಹಣಕಾಸು ನಿರ್ದೇಶಕ ವಿ.ಜಿ. ಪ್ರಭು, ಧಾರವಾಡ ಎಸ್.ಡಿ.ಎಂ ಡೆಂಟಲ್ ಹಾಸ್ಪಿಟಲ್ ಪಿ.ಆರ್.ಒ ನಾಗ್ ಕುಮಾರ್, ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿ.ಸಿ.ಒ ಗಣೇಶ್ ಪ್ರಸಾದ್ ಎಸ್. ಕಾಮತ್, ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.