
ದ.ಕ. ಜಿಲ್ಲೆಯಲ್ಲಿ ಸೌಹಾರ್ದತೆ ಹದಗೆಡುತ್ತದೆ. ಇದಕ್ಕಾಗಿ ಸೌಹಾರ್ದ ಸಭೆ
ಉಳ್ಳಾಲ: ಇಡೀ ದೇಶದ ಆರ್ಥಿಕತೆಯನ್ನು ಅಭಿವೃದ್ಧಿ ಮಾಡಿದ್ದು ಬ್ಯಾಂಕ್‌ಗಳು. ಬಹಳಷ್ಟು ಹೆಸರು ಪಡೆದಿರುವ ದ.ಕ. ಜಿಲ್ಲೆಯಲ್ಲಿ ಸೌಹಾರ್ದತೆ ಹದಗೆಡುತ್ತದೆ. ಇದಕ್ಕಾಗಿ ಸೌಹಾರ್ದ ಸಭೆ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು
ಅವರು ಪಜೀರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜೀರ್‌ನಲ್ಲಿ ಬುಧವಾರ ನಡೆದ ಅಗ್ನಿ ಶಾಮಕ ಠಾಣೆಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸ್ಪೀಕರ್ ಆಗಲು ಧೈರ್ಯದ ಜೊತೆಗೆ ಅನುಭವ, ಹಿರಿತನ ಬೇಕು, ಐದಾರು ಬಾರಿ ಶಾಸಕರಾಗಿ ಅನುಭವ ಇರಬೇಕು. ಇದನ್ನು ಸ್ಪೀಕರ್ ಯು.ಟಿ. ಖಾದರ್ ಸಾಧಿಸಿ ತೋರಿಸಿದ್ದಾರೆ. ಸದನದ ಗೌರವ ಎತ್ತಿ ಹಿಡಿಯುವಂತಹ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಸಭಾಧ್ಯಕ್ಷ ಸ್ಥಾನ ನಿರ್ವಹಣೆ ಜೊತೆಗೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರತಿಯೊಂದು ತಾಲೂಕಿನಲ್ಲಿ ಅಗ್ನಿ ಶಾಮಕ ದಳ ಠಾಣೆ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ.ಕಡಬ ಮತ್ತು ಮುಲ್ಕಿಗೂ ಅಗ್ನಿ ಶಾಮಕ ದಳದ ಠಾಣೆ ಮಂಜೂರು ಮಾಡಲಾಗಿದೆ. ಹಲವು ಮಂದಿ ಜೀವ ಉಳಿಸುವ ಕೆಲಸ ಅಗ್ನಿ ಶಾಮಕ ದಳ ಮಾಡುತ್ತದೆ. ಆಸ್ತಿಪಾಸ್ತಿಗಳನ್ನು ಉಳಿಸುತ್ತದೆ ಎಂದರು.
ಅಭಿವೃದ್ಧಿಗಾಗಿ ನಾಲ್ಕು ಲಕ್ಷ ಒಂಭತ್ತು ಕೋಟಿ ರೂ. ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಜತೆಗೆ ಗ್ಯಾರಂಟಿ ಅನುಷ್ಠಾನ ಪ್ರಗತಿಯಲ್ಲಿದೆ. ಗ್ಯಾರಂಟಿ ಯೋಜನೆ ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಸೀಮಿತ ಮಾಡಿಲ್ಲ. ಇದಕ್ಕೆ 150,000 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಟ್ಟಿದ್ದೇವೆ ಎಂದು ಹೇಳಿದರು.
ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಸೇವೆ ಮೀಸಲಿಟ್ಟಿದ್ದೇನೆ. 30 ವರ್ಷಗಳಿಗೆ ಬೇಕಾದ ಎಲ್ಲಾ ಯೋಜನೆಗಳು ಕ್ಷೇತ್ರದಲ್ಲಿ ಆಗಿವೆ. ಕುಡಿಯುವ ನೀರಿಗಾಗಿ 500 ಕೋಟಿಗೂ ಅಧಿಕ ಅನುದಾನ ಮೀಸಲಿಟ್ಟು ಕೆಲಸ ಆಗುತ್ತಿದೆ. ವಿದ್ಯುತ್ ಅಂಡರ್ ಗ್ರೌಂಡ್ ಕಾಮಗಾರಿ, ರಸ್ತೆ ಆಗಿದೆ. ಈಗ ಅಗ್ನಿಶಾಮಕ ದಳ ವ್ಯವಸ್ಥೆ ಮಾಡಲಾಗಿದೆ. ದೇರಳಕಟ್ಟೆ, ಕುತ್ತಾರ್, ಮುಡಿಪು ಭಾಗ ಗುರುತಿಸಿ ತಾಲೂಕಿನ ಮಧ್ಯ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣೆಯನ್ನು ಮಾದರಿ ಠಾಣೆಯಾಗಿ ಮಾಡುವ ಯೋಜನೆ ಇದೆ. ಇದನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಭಿನ್ನಾಭಿಪ್ರಾಯ ದೂರ ಇಟ್ಟು ಸಾಮರಸ್ಯ ಮಾಡಲು ಸಾಧ್ಯವಿಲ್ಲ. ಎಲ್ಲಾ ಭಿನ್ನಾಭಿಪ್ರಾಯ ಸೇರಿಸಿ ಚರ್ಚಿಸಿ ಸಾಮರಸ್ಯ ನಿರ್ಮಾಣ ಮಾಡುವ ಕೆಲಸ ಆಗಬೇಕು ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದರೆ ಸಾಮರಸ್ಯ ಆಗದು ಎಂದರು.
ಪಜೀರ್ ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್ ರಫೀಕ್ ಪಜೀರ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಅಗ್ನಿಶಾಮಕ ದಳದ ಉಪನಿರ್ದೇಶಕ ಈಶ್ವರ ನಾಯ್ಕ, ಚಂದ್ರ ಹಾಸ್ ಕರ್ಕೇರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ, ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರೋಜಿನಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು.
ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ತಿರುಮಲೇಶ್ ಸ್ವಾಗತಿಸಿದರು.