
ಶಿರ್ವ-ಬೆಳ್ಮಣ್ ರಾಜ್ಯ ಹೆದ್ದಾರಿ-ಕುಂರ್ಜ ಕ್ರಾಸ್‌ನಿಂದ ತುಂಡುಬಲ್ಲೆ 50 ಮೀ. ಅಂತರದಲ್ಲಿ ಮರಣ ಗುಂಡಿಗಳ ಸರಮಾಲೆ....!
ಶಿರ್ವ: ಕಟಪಾಡಿ-ಬೆಳ್ಮಣ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕೋಡುಗುಡ್ಡೆಯಿಂದ ಶಿರ್ವ ನ್ಯಾರ್ಮ ಸೊಸೈಟಿಯವರೆಗಿನ ಸಾವಿರಾರು ಹೊಂಡ ಗುಂಡಿಗಳ ಅವ್ಯವಸ್ಥೆ ಒಂದು ಅಧ್ಯಾಯವಾದರೆ, ಅದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯಿಂದ ತೇಪೆ ಕಾರ್ಯ ನಡೆಸಿದ ಶಿರ್ವ ಪದವು ಕಾಲೇಜು ಕ್ರಾಸ್ ರಸ್ತೆಯಲ್ಲಿ ಒಂದೇ ಮಳೆಗೆ ಹಳೆಯ ಗುಂಡಿಗಳು ಪುನಃ ಪ್ರತ್ಯಕ್ಷವಾಗಿವೆ. ಅಲ್ಲಿಂದ ನೂರು ಮೀಟರ್ ಅಂತರದಲ್ಲಿ ಗುಂರ್ಜ-ತುಂಡುಬಲ್ಲೆ ಇಳಿಜಾರಿನಲ್ಲಿ ಕೇವಲ 50 ಮೀಟರ್ ಅಂತರದಲ್ಲಿ ಮರಣಗುಂಡಿಗಳ ಸರಮಾಲೆಯೇ ನಡೆದಿದೆ.
ಸುರಿಯುವ ಮಳೆಯಿಂದ ಹರಿಯುವ ನೀರಿನ ರಭಸಕ್ಕೆ ದಿನದಿಂದ ದಿನಕ್ಕೆ ಈ ಗುಂಡಿಗಳು ಅಗಲ ಮತ್ತೂ ಆಳವಾಗುತ್ತಿವೆ. ಪ್ರತೀ ದಿನ ದ್ವಿಚಕ್ರವಾಹನ ಸವಾರರು, ರಿಕ್ಷಾ, ಕಾರು ಚಾಲಕರು ಹೊಂಡ ತಪ್ಪಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಿರುವುದಲ್ಲದೆ, ನೀರು ತುಂಬಿದ ರಸ್ತೆಯಲ್ಲಿ ಹೊಂಡಕ್ಕೆ ಬಿದ್ದು ಕೈಕಾಲು ಮುರಿದು ಕೊಂಡವರೂ ಇದ್ದಾರೆ.
ಸ್ಥಳೀಯ ಸಮಾಜ ಸೇವಕರಾದ ರಿಚಾರ್ಡ್ ಫೆರಾವೊ ಗುಂರ್ಜ ಇವರು ಮಂಗಳವಾರ ಸಂಜೆ ಸ್ಥಳೀಯರೊಂದಿಗೆ ದೊಡ್ಡ ಹೊಂಡದಲ್ಲಿ ಬಾಳೆಗಿಡವನ್ನು ನೆಟ್ಟು ವಾಹನ ಸವಾರರಿಗೆ ‘ಆಳ ಹೊಂಡಗಳಿವೆ...! ಎಚ್ಚರಿಕೆ...! ನಿಧಾನವಾಗಿ ಚಲಿಸಿ..!’ ಎಂದು ಎಚ್ಚರಿಸುತ್ತಿದ್ದು, ಸ್ಥಳೀಯ ಮುಖಂಡರು, ಇಲಾಖೆ ಈ ಬಗ್ಗೆ ಗಮನಹರಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆಗೆ ಗ್ಯಾರಂಟಿ ಯಾವಾಗ:
ಈ ಭಾಗದಲ್ಲಿ ಪ್ರತೀ ದಿನ ಅಪಘಾತಗಳು ಆಗ್ತಾ ಇವೆ. ಕೇಳುವವರಿಲ್ಲ. ಹೇಳುವವರಿಲ್ಲ. ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸರಕಾರ ಮೊದಲು ಎಲ್ಲರಿಗೂ ಅತೀ ಅಗತ್ಯವಾಗಿರುವ ರಸ್ತೆಗಳಿಗೆ ಗ್ಯಾರಂಟಿ ಕೊಡುವುದು ಯಾವಾಗ? ನಮಗೆ ಮೊದಲು ರಸ್ತೆಯ ಗ್ಯಾರಂಟಿ ಕೊಡಿ. ಉಳಿದೆಲ್ಲಾ ಮತ್ತೆ ಕೊಡಿ ಎಂದು ಸ್ಥಳೀಯ ಹಿರಿಯ ನಾಗರಿಕರೊಬ್ಬರು ಗಟ್ಟಿ ಧ್ವನಿಯಲ್ಲಿ ಉದ್ಘಾರಿಸಿದರು.
ಈ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಗಳಿಲ್ಲ. ರಸ್ತೆಯ ಮೇಲೆನೇ ನೀರು ರಭಸವಾಗಿ ಹರಿಯುತ್ತದೆ. ಎಷ್ಟೇ ತೇಪೆ ಕಾರ್ಯ ಮಾಡಿದರೂ ಪ್ರತೀ ವರ್ಷ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗುತ್ತವೆ. ರಸ್ತೆಯ ಎರಡೂ ಬದಿಗೆ ಚರಂಡಿಗಳನ್ನು ನಿರ್ಮಿಸಿ ತುರ್ತಾಗಿ ಕಾಂಕ್ರಿಟ್ ರಸ್ತೆಯ ಅಗತ್ಯ ಇದೆ. ಮೋರಿಯನ್ನು ನಿರ್ಮಿಸಿ ರಸ್ತೆಯನ್ನು ಎತ್ತರಗೊಳಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಇಲಾಖೆ ಹಾಗೂ ಚುನಾಯಿತ ಪ್ರತಿನಿಧಿಗಳು ತುರ್ತು ಗಮನ ಹರಿಸಬೇಕು ಎಂದಯ ಟೆಂಪೋ ಚಾಲಕ ಮೈಕಲ್ ಮತಾಯಸ್ ಪಿಲಾರು ತಿಳಿಸಿದರು.
ಈ ರಸ್ತೆಯಲ್ಲಿ ಹೊಸದಾಗಿ ಬರುವ ದ್ವಿಚಕ್ರವಾಹನ ಚಾಲಕರು ಗುಂಡಿಗಳ ಅರಿವಿಲ್ಲದೆ ನೀರು ತುಂಬಿದ ಹೊಂಡದಲ್ಲಿ ಆಕಸ್ಮಾತ್ ಬಿದ್ದು ಕೈಕಾಲಿಗೆ ಪೆಟ್ಟು ಮಾಡಿಕೊಂಡವರು, ಮೂಳೆ ಮುರಿತಕ್ಕೆ ಒಳಗಾದವರು ಸಾಕಷ್ಟು ಇದ್ದಾರೆ. ರಾತ್ರಿ ಈ ಭಾಗದಲ್ಲಿ ಪ್ರತೀ ದಿನ ಬಿದ್ದು ಬೊಬ್ಬೆ ಹೊಡೆಯುವ ಸದ್ದು ಕೇಳಿ ಓಡೋಡಿ ಬಂದು ಬಿದ್ದವರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸುವುದೇ ಒಂದು ಸಮಸ್ಯೆ ಆಗಿದೆ. ರಸ್ತೆ ಪೂರ್ಣ ಪ್ರಮಾಣದಲ್ಲಿ ರಿಪೇರಿ ಆಗುವವರೆಗೆ ಈ ಭಾಗದಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ತುರ್ತು ವಾಹನದ ಜತೆಯಲ್ಲಿ ಓರ್ವ ಆರೋಗ್ಯ ಕಾರ್ಯಕರ್ತ ಹಾಗೂ ಪೋಲಿಸ್ ಸಿಬ್ಬಂಧಿ ಇಡುವ ವ್ಯವಸ್ಥೆಯನ್ನು ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಆಡಳಿತ ಮಾಡಬೇಕು. ಇಲ್ಲದಿದ್ದರೆ ಸ್ಥಳಿಯರೆಲ್ಲರನ್ನೂ ಸೇರಿಸಿ ಸಂಜೆ 6 ಗಂಟೆಯಿಂದ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಸ್ಥಳೀಯ ನಿವಾಸಿ ರಿಚಾರ್ಡ್ ಫೆರಾವೊ. ಗುಂರ್ಜ ಹೇಳಿದರು.