ಖಾಸಗಿ ಕಟ್ಟಡವೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಪತ್ತೆ: ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ
ಖಚಿತ ಮಾಹಿತಿಯನ್ವಯ ಈ ದಾಳಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಆಹಾರ ಇಲಾಖಾ ಅಧಿಕಾರಿಗಳು ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 85 ಸಾವಿರ ರೂ.ಗಳಿಗೂ ಅಧಿಕ ಮೌಲ್ಯದ ಸುಮಾರು 25 ಕ್ವಿಂಟಲ್ ಪಡಿತರ ಅಕ್ಕಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಗೋಡೌನ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಪಡಿತರ ಬೆಳ್ತಿಗೆ ಅಕ್ಕಿ 21 ಕ್ವಿಂಟಲ್ ಹಾಗೂ 4 ಕೆಜಿಯ ದಾಸ್ತಾನು ಮತ್ತು ಕುಚ್ಚಲಕ್ಕಿಯ 4 ಕ್ವಿಂಟಲ್ ಹಾಗೂ 67 ಕೆಜಿಯ ದಾಸ್ತಾನನ್ನು ಪತ್ತೆ ಹಚ್ಚಿ ಸತವಾಧೀನ ಪಡಿಸಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕ ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ ಈ ದಾಳಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಸಂದರ್ಭ ತೂಕದ ಮಾಪನ ಮತ್ತು ಅಕ್ಕಿ ಸಾಗಾಟಕ್ಕೆಂದು ತಂದ ಆಟೊರಿಕ್ಷಾವನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಪೂರೈಸಬೇಕಾಗಿದ್ದ ಅಕ್ಕಿ ಇಲ್ಲಿಗೆ ಹೇಗೆ ಬಂತು ಎಂಬ ಕುರಿತು ತನಿಖೆ ನಡೆಸಲಾಗುತ್ತಿದ್ದು, ಬೇರೆ ಕಡೆಗೆ ಅಕ್ರಮ ಸಾಗಾಟ ಮಾಡಲು ದಾಸ್ತಾನು ಇರಿಸಲಾಗಿತ್ತೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಆಹಾರ ಇಲಾಖೆ ದೂರಿನಂತೆ ಪ್ರಕರಣ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದೆ.
