ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿವಾರಣೆಗೆ ಬಂದ ಯೂಟ್ಯೂಬರ್ ಸಮೀರ್ ಎಂ.ಡಿ.

ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿವಾರಣೆಗೆ ಬಂದ ಯೂಟ್ಯೂಬರ್ ಸಮೀರ್ ಎಂ.ಡಿ.


ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಮಾನಹಾನಿಕರ ವಿಡಿಯೋ ಹರಿಯಬಿಟ್ಟ ಹಾಗೂ ಬುರುಡೆ ಪ್ರಕರಣದ ಅನಾಮಿಕನ ಪರವಾಗಿ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಪ್ರಚಾರ ನಡೆಸಿದ ಆರೋಪದಲ್ಲಿ ಯೂಟ್ಯೂಬರ್‌ ಸಮೀರ್‌ ಎಂ.ಡಿ. ಭಾನುವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಸಮೀರ್‌ ಎಂಡಿ ತನ್ನ ದೂತ ಯೂಟ್ಯೂಬ್‌ ಚಾನೆಲ್‌ನಲ್ಲಿ ಕೃತಕಬುದ್ಧಿಮತ್ತೆ(ಎಐ) ವಿಡಿಯೋ ಮಾಡಿ ಹರಿಯಬಿಟ್ಟಿದ್ದ. ಇದರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಸೋಮೋಟೋ ಪ್ರಕರಣ ದಾಖಲಾಗಿತ್ತು. ಇದರಿಂದಾಗಿ ಸಮೀರ್‌ಗೆ ಬಂಧನ ಭೀತಿ ಎದುರಾಗಿತ್ತು. ಈ ಬಗ್ಗೆ ಸಮೀರ್‌ ಸಲ್ಲಿಸಿದ ಅರ್ಜಿಗೆ ಮಂಗಳೂರು ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಅಲ್ಲದೆ ಕರೆದಾಗ ವಿಚಾರಣೆಗೆ ಹಾಜರಾಗಿ ವಿಚಾರಣೆಗೆ ಸಹಕರಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಸಮೀರ್‌ ಸೌಜನ್ಯ ಕೇಸ್‌ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಕಾರಿನಲ್ಲಿ ನಾಲ್ವರು ವಕೀಲರ ಜೊತೆ ಪೊಲೀಸ್‌ ಠಾಣೆಗೆ ಆಗಮಿಸಿದ್ದರು.

ಕ್ರೈಂ ನಂಬರ್‌ 42/ 2025ರ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಬೆಳಗ್ಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಸಮರ್ಥ್ ದೂರಿನಡಿ ಪ್ರಕರಣ ದಾಖಲಾಗಿತ್ತು. ಜುಲೈ 28, ಅಗಸ್ಟ್ 02 ಹಾಗೂ ಅಗಸ್ಟ್ 13ರಂದು ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿತ್ತು. ಮೂರು ಬಾರಿ ನೋಟಿಸ್‌ ನೀಡಿದರೂ ಸಮೀರ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಆತನ ಬಂಧನಕ್ಕೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಸಮೀರನ ಬೆಂಗಳೂರಿನ ಬಾಡಿಗೆ ಮನೆ ಹಾಗೂ ಕೋಲಾರದ ಸ್ವಂತ ನಿವಾಸಕ್ಕೆ ತೆರಳಿದ್ದರು. ಆದರೆ ಸಮೀರ ಅಲ್ಲಿ ಪತ್ತೆಯಾಗದೆ ಮನೆಗೆ ಬೀಗ ಹಾಕಲಾಗಿತ್ತು. ಹಾಗಾಗಿ ಆತನ ಮನೆಯ ಗೋಡೆಗೆ ನೋಟಿಸ್‌ ಅಂಟಿಸಿ ಬಂದಿದ್ದರು. ಈ ಮಧ್ಯೆ ಮಂಗಳೂರು ನ್ಯಾಯಾಲಯ ಸಮೀರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಠಾಣೆಗೆ ಆಗಮಿಸಿದ ಸಮೀರ್‌ನ್ನು ಠಾಣಾಧಿಕಾರಿ ನಾಗೇಶ್‌ ಕದ್ರಿ ಅವರು ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ ಆರಂಭಗೊಂಡ ವಿಚಾರಣೆ ನಿರಂತರ ಸಂಜೆ ವರೆಗೂ ನಡೆದಿದೆ. ವಿಚಾರಣೆ ವೇಳೆ ಆತನಿಂದ ಮಹತ್ವದ ಸಂಗತಿಗಳನ್ನು ತನಿಖಾಧಿಕಾರಿಗಳು ಪಡೆದುಕೊಂಡಿದ್ದಾರೆ. ಭದ್ರತೆ ಸಲುವಾಗಿ ಸಮೀರ್‌ ಧರ್ಮಸ್ಥಳ ಬದಲು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾಗಿ ಹೇಳಲಾಗಿದೆ. ಸಮೀರ್‌ ವಿರುದ್ಧ ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ ಮತ್ತಿತರ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಕೇಸ್‌ಗಳು ದಾಖಲಾಗಿದೆ.

ಮೊಬೈಲ್‌ ಕಸಿದಿದ್ದ ಬುರುಡೆ ಗ್ಯಾಂಗ್‌:

ತಲೆಬುರುಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ) ಕಸ್ಟಡಿಯಲ್ಲಿ ಇರುವ ಅನಾಮಿಕ ದೂರುದಾರ ಚಿನ್ನಯ್ಯನ ವಿಚಾರಣೆಯನ್ನು ಭಾನುವಾರವೂ ತನಿಖಾ ತಂಡ ನಡೆಸಿದೆ.

ಕೋರ್ಟ್‌ಗೆ ಹಾಜರುಪಡಿಸಿದ ತಲೆಬುರುಡೆ ಬಗ್ಗೆ ತನಿಖಾ ತಂಡ ಬಾರಿ ಬಾರಿ ಪ್ರಶ್ನಿಸಿದರೂ ಆತ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಶನಿವಾರ ಎಸ್‌ಐಟಿ ಬಂಧಿಸಿತ್ತು. ಶನಿವಾರ ರಾತ್ರಿ ಕೂಡ ಚಿನ್ನಯ್ಯ ವಿಚಾರಣೆ ನಡೆಸಲಾಗಿದ್ದು, ಭಾನುವಾರವೂ ವಿಚಾರಣೆ ಮುಂದುವರಿದಿದೆ.

ವಿಚಾರಣೆ ವೇಳೆ ಚಿನ್ನಯ್ಯನ ಮೊಬೈಲ್‌ಗೆ ಪೊಲೀಸರು ತಲಾಶ್‌ ಮಾಡಿದ್ದಾರೆ. ಈ ವೇಳೆ ನನ್ನಲ್ಲಿ ಮೊಬೈಲ್‌ ಇಲ್ಲ, ಅದನ್ನು ನಾನು ಕೋರ್ಟ್‌ಗೆ ಬುರುಡೆ ತೆಗೆದುಕೊಂಡು ಹೋದಾಗಲೇ ಬುರುಡೆ ತಂಡ ಮೊಬೈಲ್‌ನ್ನು ಪಡೆದುಕೊಂಡಿದೆ ಎಂದಿದ್ದಾನೆ.

ಅಂದಿನಿಂದ ವಕೀಲರ ಜೊತೆ ಮಾತ್ರ ನನಗೆ ಮಾತನಾಡಲು ಬುರುಡೆ ತಂಡ ಅವಕಾಶ ನೀಡಿದೆ. ಹಾಗಾಗಿ ನನ್ನ ಮೊಬೈಲ್ ಎಲ್ಲಿದೆ ಎಂಬುದು ಗೊತ್ತಿಲ್ಲ. ಇನ್ನು ಕೂಡ ನನ್ನ ಮೊಬೈಲ್‌ ಬುರುಡೆ ಗ್ಯಾಂಗ್‌ ಬಳಿ ಇರುವ ಶಂಕೆಯನ್ನು ಚಿನ್ನಯ್ಯ ತನಿಖಾ ತಂಡದಲ್ಲಿ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಚಿನ್ನಯ್ಯನ ಮೊಬೈಲ್‌ನ್ನು ವಶಕ್ಕೆ ಪಡೆಯಲು ಎಸ್‌ಐಟಿ ನಿರ್ಧರಿಸಿದೆ.

ತಿಮರೋಡಿಗೆ ಮತ್ತೆ ನೋಟಿಸ್‌ ಸಾಧ್ಯತೆ:

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಬಗ್ಗೆ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಾದ ಕೇಸಿನಲ್ಲಿ ಬಂಧಿತರಾಗಿ ಜಾಮೀನಿನಲ್ಲಿ ಹೊರಬಂದಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಬೆಳ್ತಂಗಡಿ ಪೊಲೀಸರು ನೋಟಿಸ್‌ ನೀಡುವ ಸಾಧ್ಯತೆ ಇದೆ.

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಉಜಿರೆಯ ಮನೆಯಿಂದ ಬ್ರಹ್ಮಾವರ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಬೇಕಾದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌, ತಿಮರೋಡಿ ಮತ್ತಿತರರ ಮೇಲೆ ಕೇಸು ದಾಖಲಾಗಿತ್ತು. ಈ ಕೇಸಿನ ವಿಚಾರಣೆಗೆ ನೋಟಿಸ್‌ ಜಾರಿಗೊಳಿಸಿದ ಕಾರಣ ಗಿರೀಶ್‌ ಮಟ್ಟಣ್ಣವರ್‌ ಶನಿವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದರು. ಈಗ ಮಹೇಶ್‌ ತಿಮರೋಡಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸುಜಾತ ಭಟ್‌ ವಿಚಾರಣೆ ಸಂಭವ:

ಅನನ್ಯಾ ಭಟ್‌ ಎನ್ನುವ ಪುತ್ರಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಕ್ಷೇತ್ರದ ವಿರುದ್ಧ ಆರೋಪ ಮಾಡಿ, ಬಳಿಕ ಅದನ್ನು ಅಲ್ಲಗಳೆದು ಗೊಂದಲದ ಹೇಳಿಕೆ ನೀಡುತ್ತಿರುವ ಬೆಂಗಳೂರು ನಿವಾಸಿ ಸುಜಾತ ಭಟ್‌ಗೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ನೋಟಿಸ್‌ ನೀಡುವ ಸಂಭವ ಇದೆ.

ಅನನ್ಯಾ ಭಟ್‌ ತನ್ನ ಪುತ್ರಿ ಎಂಬ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ತನಿಖಾ ಅಧಿಕಾರಿಗಳ ದಾರಿತಪ್ಪಿಸುತ್ತಿರುವ ಆರೋಪದಲ್ಲಿ ಸುಜಾತ ಭಟ್‌ ಅವರನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪ್ರಸಕ್ತ ಸುಜಾತ ಭಟ್‌ ವಾಸಿಸುವ ಬೆಂಗಳೂರಿನ ಮನೆಗೆ ಬನಶಂಕರಿ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article