
ಧರ್ಮಸ್ಥಳ ಪ್ರಕರಣ: 13ನೇ ಸ್ಥಳದ ರಹಸ್ಯ ಬೇಧಿಸಲು ಜಿ.ಪಿ.ಆರ್. ತಂತ್ರಜ್ಞಾನ ಬಳಕೆಗೆ ಮುಂದಾದ ಎಸ್‌ಐಟಿ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಬಾಕಿ ಇರುವ 13ನೇ ಸ್ಥಳದ ಶೋಧ ಕಾರ್ಯಾಚರಣೆಗೆ ಪೂರಕವಾಗಿ ಜಿ.ಪಿ.ಆರ್. ಯಂತ್ರ ಬಳಕೆಗೆ ಮುಂದಾಗಿದೆ. ಇಂದು ಸ್ಥಳಕ್ಕೆ ಜಿ.ಪಿ.ಆರ್. ಯಂತ್ರವನ್ನು ತರಿಸಲಾಗಿದ್ದು, ಕಾರ್ಯಾಚರಣೆಯ ಪೂರ್ವಭಾವಿ ರೂಪುರೇಷೆಗಳ ಸಿದ್ಧತೆಯಾಗಿ ಪ್ರಾತ್ಯಕ್ಷಿಕೆ ನಡೆದಿದೆ.
ಜಿ.ಪಿ.ಆರ್. ಕಾರ್ಯಾಚರಣೆ ಹೇಗೆ..
ನೇತ್ರಾವತಿ ನದಿ ದಡದ ಬಂಡೆಯ ಪ್ರದೇಶದಲ್ಲಿರುವ ೧೩ನೇ ಸ್ಥಳದಲ್ಲಿ ಭೂಮಿಯ ಆಳದಲ್ಲಿ ಹೂತಿರುವ ಶವಗಳ ಬಗ್ಗೆ ಸುಳಿವು ಪಡೆಯಲು ಉನ್ನತ ತಂತ್ರಜ್ಞಾನದ ಬಳಕೆಗಾಗಿ ಡ್ರೋನ್-ಮೌಂಟೆಡ್ ಜಿ.ಪಿ.ಆರ್. (ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್)ನ್ನು ಬಳಸಿ ಸ್ಕ್ಯಾನ್ ನಡೆಸಲಾಗುವುದು.
ಭೂಮಿಯ ಆಳದಲ್ಲಿರುವ ಮತ್ತು ಮಾನವರು ಸುಲಭವಾಗಿ ತಲುಪಲು ಕಷ್ಟಕರವಾದ ನದಿ ದಡದಲ್ಲಿ ಶೋಧ ಕಾರ್ಯವನ್ನು ಸುಲಭಗೊಳಿಸಲು, ಡ್ರೋನ್ ಜಿ,ಪಿ.ಆರ್. ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸಾಮಾನ್ಯ ಜಿ.ಪಿ.ಆರ್. ಆಂಟೆನಾವನ್ನು ಡ್ರೋನ್‌ನ ಕೆಳಭಾಗದಲ್ಲಿ ಅಳವಡಿಸಿ, ಡ್ರೋನ್ ಗಾಳಿಯಲ್ಲಿ ಹಾರುತ್ತಾ ನೆಲದ ಮೇಲ್ಮೈಗೆ ಸಮೀಪವಾಗಿ ಜಿಪಿಆರ್ ಸಂಕೇತಗಳನ್ನು ಕಳುಹಿಸುತ್ತದೆ. ಈ ಸಂಕೇತಗಳು ನೆಲದೊಳಗೆ ಹೋಗಿ ಪ್ರತಿಫಲಿಸಿ ಮರಳಿ ಬರುತ್ತವೆ. ನಂತರ ಈ ಸಂಕೇತಗಳನ್ನು ಸೆನ್ಸರ್‌ಗಳು ದಾಖಲಿಸಿಕೊಂಡು, ಸಾಫ್ಟ್‌ವೇರ್ ಮೂಲಕ ೨ಡಿ ಅಥವಾ ೩ಡಿ ಚಿತ್ರವಾಗಿ ಪರಿವರ್ತಿಸಿ ನಿಖರವಾದ ಫಲಿತಾಂಶವನ್ನು ನೀಡುತ್ತದೆ. ಈ ತಂತ್ರಜ್ಞಾನವು ವೇಗವಾಗಿ ಮತ್ತು ದೊಡ್ಡ ಪ್ರದೇಶವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ. ಜಿಪಿಆರ್ ತಂತ್ರಜ್ಞಾನದ ಮೂಲಕ ಭೂಮಿಯಾಳದ ಸ್ಕ್ಯಾನಿಂಗ್ ಮೂಲಕ ಶವಗಳ ಅಸ್ತಿತ್ವ ಪರಿಶೀಲಿಸಲಾಗುತ್ತಿದೆ. ಜಿಪಿಆರ್ ಸ್ಕ್ಯಾನಿಂಗ್‌ನಲ್ಲಿ ಅಸಹಜತೆ ಕಂಡುಬಂದಲ್ಲಿ ಉತ್ಖನನ ಕಾರ್ಯ ನಡೆಯುತ್ತದೆ.
ಮೊದಲು..
ಭೂಮಿಯ ಆಳದಲ್ಲಿರುವ ಕಳೇಬರದ ಅವಶೇಷಗಳು ಸುಳಿವು ಪಡೆಯಲು ಜಿ.ಪಿ.ಆರ್. ತಂತ್ರಜ್ಞಾನವನ್ನು ಬಳಕೆ ಮಾಡಿರುವ ಪ್ರಸಂಗ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಅಥವಾ ರಾಜ್ಯದಲ್ಲಿ ನಡೆದಿರುವ ಉಲ್ಲೇಖ ಇಲ್ಲ. ಬಹುಶ: ಇದೇ ಪ್ರಥಮ ಎನ್ನಲಾಗುತ್ತಿದೆ. ಈ ಮೂಲಕ 13ನೇ ಸ್ಥಳದ ರಹಸ್ಯ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ.
ಮುನ್ನೆಲೆಗೆ ಬಂದ ಪದ್ಮಲತಾ ಪ್ರಕರಣ..
ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿರುವಾಗಲೇ 39 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೊಲೆಯಾಗಿದ್ದಾಳೆ ಎನ್ನಲಾದ ಪಿಯುಸಿ ವಿದ್ಯಾರ್ಥಿನಿ ಪದ್ಮಲತಾ ಪ್ರಕರಣ ಮುನ್ನೆಲೆಗೆ ಬಂದಿದ್ದು ಪ್ರಕರಣದ ಮರು ತನಿಖೆಗಾಗಿ ಪದ್ಮಲತಾ ಸಹೋದರಿ ಇಂದ್ರಾವತಿ ಎಸ್‌ಐಟಿಗೆ ದೂರು ನೀಡಿದ್ದಾರೆ.