ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಯಾಗಿಲ್ಲ: ಸಂಸದ ಕ್ಯಾ. ಚೌಟ ಕಳವಳ

ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಯಾಗಿಲ್ಲ: ಸಂಸದ ಕ್ಯಾ. ಚೌಟ ಕಳವಳ

ಮಂಗಳೂರು: ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಆಯುಷ್ಮಾನ್ ಯೋಜನೆಗೆ ಕರ್ನಾಟಕ ಸರ್ಕಾರವು ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ನಿಯಮ 377ರ ಅಡಿಯಲ್ಲಿ ಲೋಕಸಭೆಯಲ್ಲಿಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿರುವ ಸಂಸದರು, ದೇಶಾದ್ಯಂತ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ವರ್ಷ ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ ಜಾರಿಗೆ ತಂದಿದೆ. ಆದರೆ ಕರ್ನಾಟಕದಲ್ಲಿರುವ ಹಿರಿಯ ನಾಗರಿಕರಿಗೆ ಈ ಯೋಜನೆಯ ಫಲಾನುಭವ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40 ರಷ್ಟು ಪಾಲನ್ನು ನೀಡುವುದಕ್ಕೆ ನಿರಾಕರಿಸಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಈ ಯೋಜನೆಯನ್ನು ಅವಲಂಬಿಸಿಕೊಂಡಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಅಗತ್ಯ ಜೀವ ರಕ್ಷಕ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಳಕಳ ವ್ಯಕ್ತಪಡಿಸಿದ್ದಾರೆ. 

ಮಂಗಳೂರು ಭಾಗದಲ್ಲಿ 70 ವರ್ಷ ದಾಟಿರುವ ಸುಮಾರು 80 ಸಾವಿರ ಹಿರಿಯ ನಾಗರಿಕರಿದ್ದಾರೆ. ಆದರೆ, ಕರ್ನಾಟಕ ಸರ್ಕಾರದ ತೀರ್ಮಾನದಿಂದಾಗಿ ಈ ಆಯುಷ್ಮಾನ್ ಭಾರತ್ ಯೋಜನೆಯಡಿ ವಾರ್ಷಿಕವಾಗಿ 5 ಲಕ್ಷ ರೂ. ವಿಮಾ ಸೌಲಭ್ಯದಡಿ ಆಸ್ಪತ್ರೆಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಬಡವರ್ಗದವರಿಗೆ ತಮ್ಮ ವೃದ್ಧಾಪ್ಯ ಜೀವನದಲ್ಲಿ ಎದುರಾಗುವ ಕಾಯಿಲೆಗಳಿಗೆ ಯಾರ ಆಶ್ರಯವೂ ಇಲ್ಲದೆ ಗುಣಮಟ್ಟದ ಚಿಕಿತ್ಸೆ ಪಡೆಯಬೇಕೆಂಬ ಬಹಳ ದೊಡ್ಡ ಆಶಯ, ಕಳಕಳಿಯೊಂದಿಗೆ ಆಯುಷ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಆದರೆ, ಆಯುಷ್ಮಾನ್ ಭಾರತ್ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಿರ್ಧಾರದಿಂದಾಗಿ ಪ್ರಧಾನಮಂತ್ರಿ ಮೋದಿ ಅವರ ವಿಷನ್ ನೆರವೇರಿಸುವುದಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೂಡಲೇ ಕರ್ನಾಟಕದಲ್ಲಿರುವ ಹಿರಿಯ ನಾಗರಿಕರ ಆರೋಗ್ಯದ ಹಕ್ಕನ್ನು ಸಂರಕ್ಷಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಬಹಳ ಜನಪ್ರಿಯವಾದ ಈ ಆಯುಷ್ಮಾನ್ ಯೋಜನೆ ಮಾನದಂಡಗಳನ್ನು ಪೂರೈಕೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂಸದ ಕ್ಯಾ. ಚೌಟ ಅವರು ಸದನದಲ್ಲಿ ಒತ್ತಾಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article