ಧರ್ಮಸ್ಥಳ ಪ್ರಕರಣ: ನೂರಾರು ಶವಗಳನ್ನು ಹೂತಿರುವುದು ಸುಳ್ಳು-ಅನಾಮಿಕನ ಸ್ನೇಹಿತ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದು ಸುಳ್ಳು ಎಂದು ಅನಾಮಿಕ ದೂರುದಾರನ ಗೆಳೆಯ ರಾಜು ಹೇಳುವ ಮೂಲಕ ಒಟ್ಟು ಪ್ರಕರಣಕ್ಕೆ ತಿರುವು ದೊರೆತಿದೆ.
ಈ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಹತ್ತು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಮಾಸ್ಕ್ ಹಾಕಿರುವ ವ್ಯಕ್ತಿ, ನಾನು ಅಕ್ಕಪಕ್ಕದ ಮನೆಯವರು. ನಾನು ಇದ್ದಾಗ ನೋಡಿದ್ದು ಕೇವಲ ಎರಡು ಶವಗಳು ಅಷ್ಟೇ. ಅದರಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು ಶವ. ಆ ಶವಗಳು ಕೊಳೆತ ಸ್ಥಿತಿಯಲ್ಲಿತ್ತು, ಆದರೆ ನಾನು ಹೂತು ಹಾಕಿಲ್ಲ. ಮರದಿಂದ ಇಳಿಸಿ ನದಿಯಲ್ಲಿ ಇದ್ದಿದ್ದನ್ನು ತೆಗೆದು ವೈದ್ಯರಿಗೆ ನೀಡಿದ್ದೆ. ಈ ವೇಳೆ ಮಾಸ್ಕ್‌ಮ್ಯಾನ್ ಅವರ ಸಹೋದರ ಇದ್ದರು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದು ಸುಳ್ಳು ಎಂದಿದ್ದಾರೆ.
ಮಾಸ್ಕ್ ಮ್ಯಾನ್ ಸುಳ್ಳು ಹೇಳುತ್ತಿದ್ದಾನೆ. ದುಡ್ಡಿನ ಆಸೆಗೆ ಸುಳ್ಳು ಹೇಳುತ್ತಿದ್ದಾನೋ ಏನೋ. ಧರ್ಮಾಧಿಕಾರಿ ವಿರುದ್ಧ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸ್ನಾನಘಟ್ಟ, ಬಾಹುಬಲಿ ಬೆಟ್ಟ, ದೇವಸ್ಥಾನದ ಬಳಿ ಕೆಲಸ ಮಾಡಿದ್ದೇನೆ. ನನಗೆ ಸ್ವಲ್ಪ ಸಮಸ್ಯೆಯಾಯಿತು, ಹಾಗಾಗಿ ಅಲ್ಲಿ ಕೆಲಸ ಬಿಟ್ಟು ಬಂದೆ. ಅರ್ಧ ಗಂಟೆ ನನ್ನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಮಾಡಿದರು ಎಂದು ಹೇಳಿದ್ದಾನೆ.
ತಿಮರೋಡಿ, ಮಟ್ಟಣ್ಣನವರ್ ಠಾಣೆಗೆ..
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯ ಎದುರು ಅಕ್ರಮ ಕೂಟ ಸೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್‌ರನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮೂವರಿಂದಲೂ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಸಹೋದರಿ ಪೋಟೊ
ಧರ್ಮಸ್ಥಳದಲ್ಲಿ ಕಾಣಿಯಾಗಿದ್ದಾಳೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ತಾಯಿ ಸುಜಾತ ಭಟ್ ತೋರಿಸಿದ್ದು ಅನನ್ಯ ಫೋಟೋ ಅಲ್ಲ, ಅದು ನನ್ನ ಸಹೋದರಿ ವಾಸಂತಿಯದ್ದು ಎಂದು ವಾಸಂತಿ ಸಹೋದರ ಎಂ. ವಿಜಯ್ ಖಾಸಗಿ ದೃಶ್ಯ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ.
ನನ್ನ ಸಹೋದರಿ ವಾಸಂತಿ 2007ರಲ್ಲಿ ಮೃತರಾಗಿದ್ದಾರೆ. ಆಕೆ ಶ್ರೀವತ್ಸ ಭಟ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಶ್ರೀವತ್ಸ ಭಟ್‌ಗೂ ಸುಜಾತಾ ಭಟ್‌ಗೂ ಏನು ಸಂಬಂಧ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಸಹೋದರಿಯನ್ನು ಎಳೆದು ತಂದಿದ್ದು ಬೇಸರ ತಂದಿದೆ. ವಾಸಂತಿ ಶವ 2007ರಲ್ಲಿ ಹೊಳೆಯಲ್ಲಿ ಪತ್ತೆಯಾಗಿತ್ತು, ಈ ಬಗ್ಗೆ ಸಿಐಡಿ ತನಿಖೆ ಆಗಿ ಆತ್ಮಹತ್ಯೆ ಎಂದು ವರದಿ ನೀಡಿದ್ದಾರೆ ಎಂದಿದ್ದಾರೆ.
ಮೊಹಾಂತಿ ಸಭೆ..
ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಇಂದು ಬೆಳ್ತಂಗಡಿಗೆ ಆಗಮಿಸಿದ್ದು, ಪ್ರಕರಣದ ತನಿಖೆಯ ಕುರಿತಂತೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಅನಾಮಿಕ ಮಾಸ್ಕ್ ಮ್ಯಾನ್ ಜೊತೆಗೆ ತಾನು 100ಕ್ಕೂ ಹೆಚ್ಚು ಶವಗಳನ್ನು ಹೂತುಹಾಕಿರುವುದಾಗಿ ರಾಜು ಹೇಳಿದ್ದಾನೆ. ಆದರೆ, ಇದು ಯಾವುದೇ ಅಪರಾಧದ ಕೃತ್ಯವಲ್ಲ. ಬದಲಾಗಿ, ವಾರಸುದಾರರಿಲ್ಲದ, ಅನಾಥ ಶವಗಳನ್ನು ಕಾನೂನುಬದ್ಧವಾಗಿ ಅಂತ್ಯಸಂಸ್ಕಾರ ಮಾಡಿದ ಕೆಲಸವಿದು ಎಂದು ರಾಜು ಸ್ಪಷ್ಟಪಡಿಸಿದ್ದಾರೆ. ವೈದ್ಯರು ಮತ್ತು ಪೊಲೀಸರ ಸಮ್ಮುಖದಲ್ಲಿಯೇ ಈ ಶವ ಸಂಸ್ಕಾರಗಳನ್ನು ನಡೆಸಲಾಗುತ್ತಿತ್ತು. ಪ್ರತಿ ಶವ ಸಂಸ್ಕಾರಕ್ಕೆ ದೇವಸ್ಥಾನದ ಮಾಹಿತಿ ಕೇಂದ್ರದಿಂದಲೇ 50 ರೂಪಾಯಿ ಪಡೆಯುತ್ತಿದ್ದೆವು ಎಂದು ರಾಜು ತಿಳಿಸಿದ್ದಾರೆ. ಆಗಸ್ಟ್ 8 ರಂದು ರಾಜು ಅವರು ಈ ಕುರಿತು 6 ಗಂಟೆಗಳ ಕಾಲ ಎಸ್‌ಐಟಿ ಅಧಿಕಾರಿಗಳ ಮುಂದೆ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ್ದಾರೆ.