
ಎರಡು ವರ್ಷಕ್ಕೊಮ್ಮೆ ಡಕ್ಕೆಬಲಿ ಉತ್ಸವ
ಈ ಬಯಲು ಆಲಯದಲ್ಲಿ ಸಮುದ್ರದ ಮರಳೇ ಪ್ರಸಾದ. ಇಂತಹ ಒಂದು ಪುಣ್ಯ ಕ್ಷೇತ್ರ ಪಡುಬಿದ್ರಿಯಲ್ಲಿದೆ. ಇದರ ಕೋಟ್ಯಂತರ ಭಜಕರು ಜಗತ್ತಿನಾದ್ಯಂತ ಇದ್ದಾರೆ.
ಈ ಬಯಲು ಆಲಯದಲ್ಲಿ ಭಜಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ಕಾಣಿಕೆ ಡಬ್ಬಿ ಇಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಫೊಟೋ, ವೀಡಿಯೋ ಮಾಡುವಂತಿಲ್ಲ. ಇಲ್ಲಿ ಬಡವ ಬಲ್ಲಿದ ಎಂಬ ಬೇಧವಿಲ್ಲ. ಆದರೂ ಇಲ್ಲಿ ದಿನಂಪ್ರತಿ ನೂರಾರು ಜನರು ಬಂದು ತಮ್ಮ ಅರಿಕೆ ಮಾಡಿಕೊಂಡು ಹೋಗುವುದು ಸಾಮಾನ್ಯ.
ಇಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಡಕ್ಕೆಬಲಿ ಉತ್ಸವವು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆಲಯವನ್ನು ಹೂ, ಹಿಂಗಾರಗಳಿಂದ ಶೃಂಗರಿಸುತ್ತಾರೆ. ರಾತ್ರಿ ಹೊತ್ತು ಗ್ಯಾಸ್ ಲೈಟ್ ಬೆಳಕಿನಲ್ಲಿ ನೋಡಿದಾಗ ಯಾವುದೋ ಲೋಕದಲ್ಲಿ ಇದ್ದಂತೆ ಭಾಸವಾಗುತ್ತದೆ.
ಈ ಗುಡಿ ಗೋಪುರ ರಹಿತ ಬ್ರಹ್ಮ ಸ್ಥಾನದಲ್ಲಿ ತುಳು ಆಟಿ ತಿಂಗಳ ಹದಿನಾರನೇ ದಿನ ಅಜೆಕಾಯಿ ಸೇವೆ ನಡೆಯುತ್ತದೆ. ಈ ಸೇವೆಯನ್ನು ಭಜಕರು ಹೂ, ಹಿಂಗಾರ, ಸೀಯಾಳ ಹಾಗೂ ತೆಂಗಿನ ಕಾಯಿ ಸಲ್ಲಿಸುತ್ತಾರೆ.
ಸಾನ್ನಿಧ್ಯದಲ್ಲಿ ದರ್ಶನ ಪಾತ್ರಿಗಳು ಅಲ್ಲಿನ ಕಲ್ಲಿಗೆ ಒಡೆದು ಆನಂತರ ಇಂದು ಸಮುದ್ರದಿಂದ ತಂದ ಮ್ರತ್ತಿಕೆಯನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಸಮುದ್ರದಿಂದ ಮ್ರತ್ತಿಕೆಯನ್ನು ಊರಿನ ವಿಪ್ರರು ಮುಂಜಾನೆ ಶುಚಿರ್ಭೂತರಾಗಿ ಬ್ರಹ್ಮ ಸ್ಥಾನದಿಂದ ಹೊರಟು ಸಮುದ್ರತೀರ ಸ್ನಾನ ಮುಗಿಸಿ ತಾವು ತಂದ ಹೆಡಿಗೆ (ಕುರುವೆ)ಯಲ್ಲಿ ಮರಳನ್ನು ತುಂಬಿಕೊಂಡು ದಾರಿಯುದ್ದಕ್ಕೂ ವಿಷ್ಣು ಸಹಸ್ರನಾಮ ಪಠಣ ಮಾಡಿ ಸನ್ನಿ ದಾನ ತಲುಪುತ್ತಾರೆ.