ಕೊಲ್ಲೂರು ನದಿಯಲ್ಲಿ ನಾಪತ್ತೆಯಾಗಿದ್ದ  ಬೆಂಗಳೂರು ಮಹಿಳೆಯ ಮೃತ ದೇಹ ಪತ್ತೆ

ಕೊಲ್ಲೂರು ನದಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಮೃತ ದೇಹ ಪತ್ತೆ


ಕೊಲ್ಲೂರು: ಬೆಂಗಳೂರಿನಿಂದ ಕೊಲ್ಲೂರಿಗೆ ಬಂದು ಸೌಪರ್ಣಿಕಾ ನದಿಯಲ್ಲಿಳಿದು ಮತ್ತೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಶನಿವಾರ ಸಮೀಪದ ಮಾವಿನಕಾರು ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ. 

ಇವರನ್ನು ಬೆಂಗಳೂರಿಗೆ ತ್ಯಾಗರಾಜ ನಗರದ ನಿವಾಸಿ, ಸಿ.ಆರ್. ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ. 

ಈಕೆ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದು, ನದಿ ದಡದಲ್ಲಿ ಕಾರು ನಿಲ್ಲಿಸಿ ಸೌಪರ್ಣಿಕಾ ನದಿಯತ್ತ ತೆರಳಿದ್ದರು. ನಂತರ ನಾಪತ್ತೆಯಾಗಿದ್ದರು. ಸಮೀಪದ ಸಿಸಿ ಟಿವಿಯಲ್ಲಿ ಈಕೆ ಸೌಪರ್ಣಿಕಾ ನದಿಯಲ್ಲಿ ಈಜಾಡುವ ದೃಶ್ಯ ಸೆರೆಯಾಗಿತ್ತು. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೊಲ್ಲೂರು ಪೊಲೀಸರು ವಸುಧಾರ ಪತ್ತೆಗೆ ತೊಡಗಿದ್ದರು. ಮುಳುಗುತಜ್ಞ ಈಶ್ವರ ಮಲ್ಪೆಹಾಗೂ ಅಗ್ನಿಶಾಮಕ ದಳದವರು ನದಿಯ ವಿವಿಧ ಕಡೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ನಡೆಸಿದರೂ ಶುಕ್ರವಾರ ಸಂಜೆಯ ತನಕ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಆಕೆಯ ನಿಗೂಢ ಕಣ್ಮರೆ ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು.

ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ಮತ್ತೆ ಶನಿವಾರ ಹುಡುಕಾಟ ನಡೆಸಿತ್ತು. ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ರಭಸ ತೀವ್ರವಾಗಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗಿತ್ತು.

ಇದೀಗ ಮಾವಿನಕಾರು ಬಳಿ ಮೃತದೇಹ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಈಶ್ವರ ಮಲ್ಪೆ ಹಾಗೂ ಸ್ಥಳೀಯ ಪ್ರದೀಪ್ ಭಟ್ ಮೊದಲಾದವರು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರೆದಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article