ಸೆ.14 ರಂದು ಕಲ್ಕೂರ ಪ್ರತಿಷ್ಠಾನದಿಂದ ‘ಶ್ರೀ ಕೃಷ್ಣ ವೇಷ ಸ್ಪರ್ಧೆ’
ಮಂಗಳೂರು: ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಶ್ರೀ ಕ್ಷೇತ್ರ ಕದ್ರಿಯ ಸಹಯೋಗದೊಂದಿಗೆ ಕಳೆದ 43 ವರ್ಷಗಳಿಂದ ಆಯೋಜಿಸಲ್ಪಡುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯು ಈ ಬಾರಿ, ಸೆಪ್ಟಂಬರ್ ತಿಂಗಳ 14 ರಂದು ಶ್ರೀ ಕ್ಷೇತ್ರ ಕದ್ರಿಯ ಆವರಣದಲ್ಲಿ ಜರಗಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಎಳೆಯ ಕಂದಮ್ಮಗಳಿಂದ ತೊಡಗಿ ವಿವಿಧ ವಯೋಮಾನಗಳ ಮಕ್ಕಳಿಗಾಗಿ ಒಟ್ಟು 42ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು. ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ರಾಧಾ ಕೃಷ್ಣ, ರಾಧಾ ಮಾಧವ,ಯಶೋದ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ, ಯಕ್ಷ ಕೃಷ್ಣ, ನಂದ ಗೋಕುಲ, ಪಂಢರಪುರ ವಿಠಲ ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಶ್ರೀ ಕೃಷ್ಣ ವರ್ಣವೈಭವ, ಶಂಖ ನಾದ,ಶಂಖ ಉದ್ಘೋಶ, ಕೃಷ್ಣ ಕಥಾ, ಶ್ರೀ ಕೃಷ್ಣ ರಂಗೋಲಿ, ಶ್ರೀ ಕೃಷ್ಣ ಗಾನ ವೈಭವ ಹಾಗೂ ಆನ್‌ಲೈನ್ ಮೂಲಕ ವೃಕ್ಷ ಕೃಷ್ಣ, ಗೋಪಾಲಕೃಷ್ಣ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಗೆ ಮುಂಚಿತವಾಗಿ ಹಾಗೂ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.