‘ಒತ್ತಡದಿಂದ ಪಾರಾಗಲು ಮಾದಕ ವ್ಯವಸನಗಳಿಗೆ ಆಕರ್ಷಿತರಾಗಬೇಡಿ’: ಡಿಸಿಪಿ ಮಿಥುನ್ ಎಚ್.ಎನ್.

‘ಒತ್ತಡದಿಂದ ಪಾರಾಗಲು ಮಾದಕ ವ್ಯವಸನಗಳಿಗೆ ಆಕರ್ಷಿತರಾಗಬೇಡಿ’: ಡಿಸಿಪಿ ಮಿಥುನ್ ಎಚ್.ಎನ್.


ಮಂಗಳೂರು: ಒತ್ತಡದಿಂದ ಪಾರಾಗಲು ಅಥವಾ ವಯೋ ಸಹಜ ಆಕರ್ಷಣೆಯಿಂದ ಪಾರಾಗುವ ಸಲುವಾಗಿ ಮಾದಕ ವ್ಯಸನಗಳಿಗೆ ಕಾಲೇಜು ವಿದ್ಯಾರ್ಥಿಗಳು ಆಕರ್ಷಿತರಾಗುವ ಬದಲು ಕ್ರೀಡೆ, ಸಂಗೀತ, ನೃತ್ಯದಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರೇಟ್‌ನ ನೂತನ ಡಿಸಿಪಿ ಮಿಥುನ್ ಎಚ್.ಎನ್. ಸಲಹೆ ನೀಡಿದ್ದಾರೆ.

ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸಭಾಂಗಣದಲ್ಲಿ ಶನಿವಾರ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರಿನ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಸಹಭಾಗಿತ್ವದಲ್ಲಿ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ಅಧ್ಯಯನವೊಂದರ ಪ್ರಕಾರ ಮಾದಕ ವ್ಯಸನಕ್ಕೆ ತುತ್ತಾಗುವವರಲ್ಲಿ ಶೇ.48 ಮಂದಿ ಕಾಲೇಜು ದಿನಗಳಲ್ಲಿ ಪ್ರಥಮ ಬಾರಿಗೆ ಈ ಚಟವನ್ನು ಆರಂಭಿಸಿರುವುದು ಕಂಡು ಬಂದಿದೆ. ಹಾಗಾಗಿ ಕಾಲೇಜು ವಿದ್ಯಾರ್ಥಿಗಳು ಒತ್ತಡ, ಸಹಜ ಆಕರ್ಷಣೆಯಿಂದ ಇಂತಹ ದುಶ್ಚಟಗಳಿಗೆ ತುತ್ತಾಗಿ ದೈಹಿಕವಾಗಿ, ಮಾನಸಿಕವಾಗಿ ಬಳಲುವ ಬದಲು ಇಂತಹ ಪಲಾಯನವಾದದ ಹಾದಿಯಿಂದ ದೂರವಿದ್ದು, ಉತ್ತಮ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. 

ಸಮಾಜವನ್ನು ಮಾದಕ ಮುಕ್ತಗೊಳಿಸುವಲ್ಲಿ ಪೊಲೀಸರ ಜತೆಗೆ ಶಿಕ್ಷಣ ಸಂಸ್ಥೆಗಳು ಕೈಜೋಡಿಸಬೇಕು. ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ನಗರದ ಎಲ್ಲಾ ಕಾಲೇಜುಗಳಲ್ಲಿ ಮಾದಕ ವ್ಯಸನಗಳ ಬಗ್ಗೆ ಗೌಪ್ಯ ದೂರುಗಳನ್ನು ನೀಡಲು ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳ ನಿಯಮಿತ ತಪಾಸಣೆಯನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ರವರು ಮಾದಕ ವ್ಯಸನಗಳಿಂದ ದೂರ ಇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ರೋಶನಿ ನಿಲಯ ಕಾಲೇಜಿನ ಸಿಸಿಲಿಯಾ ಫರೀದಾ ಗೋವಿಯಸ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪೊಲೀಸ್ ಅಧಿಕಾರಿ ಮಾರುತಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞೆ ಡಾ. ಪ್ರಜಕ್ತಾ ರಾವ್ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಸುಧನ್ವ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article