
ಎನ್‌ಐಎ ಮೂರು ಜಿಲ್ಲೆಗಳಲ್ಲಿ 18 ಕಡೆ ದಾಳಿ: ಕೆಲವು ಸೊತ್ತುಗಳು ವಶ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಶನಿವಾರ ಬೆಳಗ್ಗೆ ಮಂಗಳೂರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 18 ಕಡೆಗಳಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಕೆಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 12 ಆರೋಪಿಗಳ ಮನೆ ಸೇರಿದಂತೆ ಒಟ್ಟು 18 ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಮೂರು ಜಿಲ್ಲೆಗಳಲ್ಲಿ ಎನ್‌ಐಎ ತಂಡ ಏಕಕಾಲಕ್ಕೆ ಈ ದಾಳಿ ನಡೆಸಿದೆ. ಅಲ್ಲಿ ಮನೆಯವರೊಂದಿಗೆ ಆರೋಪಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತ ಹೆಚ್ಚಿನ ಆರೋಪಿಗಳ ನಿವಾಸಗಳು ಬಜ್ಪೆ ಮತ್ತು ಸುರತ್ಕಲ್ ಪರಿಸರದಲ್ಲಿವೆ. ಬಜಪೆ ಠಾಣಾ ವ್ಯಾಪ್ತಿಯಲ್ಲಿ 10 ಕಡೆ ಹಾಗೂ ಸುರತ್ಕಲ್‌ನ 4 ಕಡೆ ದಾಳಿ ನಡೆಸಲಾಗಿದೆ.
ಘಟನೆ ನಡೆದ ಸಂದರ್ಭ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸಿದ ಕಿನ್ನಿಪದವುನಲ್ಲಿರುವ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿಯೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಘಟನಾ ಸ್ಥಳದ ಪರಿಸರದಲ್ಲಿದ್ದ ಅಂಗಡಿ ಮಾಲೀಕರಿಂದಲೂ ವಿವರ ಪಡೆದಿದ್ದಾರೆ. ಮಂಗಳೂರು ನಗರ ಪೊಲೀಸರು ಆರಂಭದಲ್ಲಿ ನಡೆಸಿದ ತನಿಖಾ ವರದಿಯನ್ನು ಎನ್‌ಐಎ ಅಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ಡಿಜಿಟಲ್ ಡಿವೈಸ್‌ಗಳು, 11 ಮೊಬೈಲ್ ಫೋನ್, 13 ಸಿಮ್‌ಗಳು, 8 ಮೆಮೋರಿ ಕಾರ್ಡ್ ಸೇರಿದಂತೆ ಇತರೆ ಮಹತ್ವದ ದಾಖಲೆಗಳನ್ನು ಎನ್‌ಐಎ ತಂಡ ವಶಪಡಿಸಿದೆ.
ಈ ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಎರಡು ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ನಡೆದಿದ್ದ ಪಾಝಿಲ್ ಕೊಲೆ ಪ್ರಕರಣಕ್ಕೆ ಪ್ರತೀಕಾರವಾಗಿ ಆತನ ಸಹೋದರ ಸಹಚರರೊಂದಿಗೆ ಸೇರಿಕೊಂಡು ಹತ್ಯೆ ನಡೆಸಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.
2025ರ ಮೇ 1ರಂದು ರಾತ್ರಿ ಸುಹಾಸ್ ಶೆಟ್ಟಿ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬಜಪೆ ಠಾಣೆ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ದಾಳಿ ನಡೆಸಿ ನಡುರಸ್ತೆಯಲ್ಲೇ ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಲಾಗಿತ್ತು. ಹಿಂದೂ ಸಂಘಟನೆ ಹಾಗೂ ಬಿಜೆಪಿಯ ಒತ್ತಾಯದಿಂದ ಕೇಂದ್ರ ಗೃಹ ಸಚಿವಾಲಯ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ ಜೂನ್ 7ರಂದು ಆದೇಶಿಸಿತ್ತು.